ಬೆಂಗಳೂರು : ದೇಶದ ಅಧಿಕಾರ ಇಂದು ದುಷ್ಟರ ಕೈಯಲ್ಲಿದೆ. ಜೈಜವಾನ್, ಜೈಕಿಸಾನ್ ಮರೆಯಾಗಿ ಮಾರೋ ಕಿಸಾನ್, ಮಾರೋ ಜವಾನ್ ಪ್ರಾರಂಭವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಟೀಕಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹಾತ್ಮ ಗಾಂಧೀಜಿ ಹಾಗೂ ದಿ. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಬಿಜೆಪಿಯವರಿಗೆ ಅಧಿಕಾರ ಮತ್ತು ಹಣದ ಅಹಂ ನೆತ್ತಿಗೇರಿದೆ. ಅಭಿವೃದ್ಧಿಯನ್ನೆ ಮರೆತು ಬಿಟ್ಟಿದ್ದಾರೆ.
ಇದನ್ನೂ ಓದಿ : ವರಿಷ್ಠರಿಂದಲೇ ಪಕ್ಷದ ಅಲಿಖಿತ ನಿಯಮ ಉಲ್ಲಂಘನೆ : ಬಿಎಸ್ ವೈಗೆ ಸಿ.ಟಿ.ರವಿ ಟಾಂಗ್
ಕೇವಲ ದೂಷಣೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಕಾಲ ಕಳೆಯುತ್ತಿದ್ದಾರೆ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಇದರ ವಿರುದ್ಧ ರೈತರು ರೊಚ್ಚಿಗೇಳುವುದು ನಿಶ್ಚಿತ. ಇದನ್ನು ಪ್ರಧಾನಿ ಮೋದಿ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಮುಂದುವರಿದು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ ಖರ್ಗೆ, ಮೋದಿ ಮೊದಲು ನೋಟ್ ಬ್ಯಾನ್ ಮಾಡಿ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದರು. ಈಗ ಲಾಕ್ಡೌನ್ ಮಾಡಿ ಕಾರ್ಮಿಕರ ಜೀವನವನ್ನು ಮೂರಾ ಬಟ್ಟೆ ಮಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೆಳಜಾತಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಅದೇ ರೀತಿ ಮಹಿಳೆಯರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಎಲ್ಲರ ಮೇಲೂ ದೌರ್ಜನ್ಯ ಹೆಚ್ಚಾಗಿದೆ. ಇದಕ್ಕೆ ಆರ್ ಎಸ್ ಎಸ್ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.