ಕೊಪ್ಪಳ: ವಿದ್ಯುತ್ ಶಾಕ್ ನಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕುಕನೂರು(Kuknoor) ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಐವತ್ತೈದು ವರ್ಷದ ಈರಪ್ಪ ಸಾವನ್ನಪ್ಪಿರುವ ವ್ಯಕ್ತಿ. ಇವರ ಸಾವಿಗೆ ವಿಂಡ್ ಪವರ್ ಕಂಪನಿಯೇ ಕಾರಣ ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಈರಪ್ಪ ಮೇಕೆ ಕಾಯುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದರು. ಆದರೆ, ಗುರುವಾರ ಸಂಜೆ ಈರಪ್ಪ ಮನೆಗೆ ಬಂದಿರಲಿಲ್ಲ. ಮೇಕೆಗಳು ಮಾತ್ರ ಮನೆಗೆ ಬಂದಿದ್ದವು. ಗಾಬರಿಗೊಂಡ ಕುಟುಂಬಸ್ಥರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಗ್ರಾಮದ ಹೊರವಲಯದಲ್ಲಿರುವ ಮರದ ಕೆಳಗೆ ಶವವಾಗಿ ಪತ್ತೆಯಾಗಿದ್ದ. ಕೃಷಿ ಜಮೀನಿನಲ್ಲಿರುವ ಹೈಟೆನ್ಷನ್ ವಿದ್ಯುತ್ ವೈಯರ್ ತಗುಲಿದ ಪರಿಣಾಮ, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.
ತನ್ನ ಮೇಕೆಗಳಿಗೆ ತಪ್ಪಲು ಹಾಕುವ ಉದ್ದೇಶದಿಂದ ಬನ್ನಿ ಮರವೇರಿದ್ದ ಈರಪ್ಪ, ಟೊಂಗೆಗಳನ್ನು ಕತ್ತರಿಸಿದ್ದ. ಈ ವೇಳೆ ವೈಯರ್ ತಗುಲಿ ಆತ ಸಾವನ್ನಪ್ಪಿದ್ದ. ಹಲವೆಡೆ ಹೈಟೆನ್ಷನ್ ವೈಯರ್ ಬಳಿಯೇ ಮರಗಳು ಇದ್ದರೂ ಮರದ ಟೊಂಗೆಗಳನ್ನು ಕತ್ತಿರಿಸುವ ಕೆಲಸ ಮಾಡಿಲ್ಲ. ಜೊತೆಗೆ ಯಾವುದೇ ಸೂಚನಾ ಫಲಕಗಳನ್ನು ಕೂಡಾ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಂಡ್ ಪವರ್ ಕಂಪನಿ ವಿರುದ್ದ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲದೇ, ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.