“ಮಂಡ್ಯದವರು ಛತ್ರಿಗಳು” ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಮಂಡ್ಯ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯರು ಈ ಹೇಳಿಕೆಯನ್ನು ಮಂಡ್ಯ ಜನರ ವಿರುದ್ಧದ ಅವಮಾನಕಾರಿಯಾದ ಹೇಳಿಕೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮಂಡ್ಯದ ಜನರ ಪಾತ್ರ ಮಹತ್ವದ್ದಾಗಿತ್ತು ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಇದರಿಂದ ಮಂಡ್ಯ ಜನರ ಬೆಂಬಲದ ಪ್ರಭಾವ ಸ್ಪಷ್ಟವಾಗಿದೆ. ಆದರೆ ಈಗ ಡಿಕೆಶಿ ಮಂಡ್ಯ ಜನರ ತ್ಯಾಗ, ಬೆಂಬಲವನ್ನು ಮರೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆದಾಯಕ್ಕಾಗಿ ಮಂಡ್ಯ ಜನರ ಮನೆ ಬಾಗಿಲು ತಟ್ಟಿದ್ದ ಡಿಕೆಶಿ, ಈಗ ಅವಮಾನಕರವಾಗಿ ಮಾತನಾಡುತ್ತಾ ಇದ್ದಾರೆ. ಮಂಡ್ಯ ಜನರ ಶ್ರಮ, ಬೆಂಬಲದ ಫಲವಾಗಿ ಅಧಿಕಾರಕ್ಕೆ ಬಂದವರು ಈ ರೀತಿ ಅವಹೇಳನಕರ ಹೇಳಿಕೆ ಕೊಡೋದು ಹೇಗೆ? ಎಂಬ ಪ್ರಶ್ನೆ ಜನರ ನಡುವೆ ಮೂಡಿದೆ.
ಆದಿಕಾಲದಿಂದಲೂ ಮಂಡ್ಯದ ಜನರು ಸ್ವಾಭಿಮಾನಿಗಳು. ನಮ್ಮನ್ನು ಛತ್ರಿಗಳು ಅಂತಾ ತಿರಸ್ಕರಿಸುವ ಹಕ್ಕು ಯಾರಿಗೂ ಇಲ್ಲ. ಇಂತಹ ದುರಹಂಕಾರಕ್ಕೆ ತಕ್ಕ ಉತ್ತರ ಕೊಡಲೇಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಅವರ ಈ ಹೇಳಿಕೆಯಿಂದ ಮಂಡ್ಯ-ಕಾಂಗ್ರೆಸ್ ಸಂಬಂಧ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಈ ವಿಷಯ ಹೇಗೆ ಬೆಳೆಯುತ್ತದೆ ಎಂಬುದು ನೋಡಬೇಕಾಗಿದೆ.