ಹಾಸನ: ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ(MBBS Student) ಡೆಂಗ್ಯೂ ಜ್ವರಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ (Hassan Private Hospital) ಈ ಘಟನೆ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದ ಕುಶಾಲ್ (22) ಮೃತ ವಿದ್ಯಾರ್ಥಿ. ಕುಶಾಲ್ ಡೆಂಗ್ಯೂ ಮಹಾಮಾರಿಯಿಂದಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ವಿದ್ಯಾರ್ಥಿಯು ಕಳೆದ ಒಂದು ವಾರದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರತಿಭಾನ್ವಿತ, ಬಡ ವಿದ್ಯಾರ್ಥಿಯಾಗಿದ್ದ ಕುಶಾಲ್, ಹಿಮ್ಸ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಭವಿಷ್ಯದಲ್ಲಿ ವೈದ್ಯನಾಗಿ ಜನಸೇವೆ ಮಾಡಬೇಕು ಎಂಬ ಹಂಬಲ ಇಟ್ಟುಕೊಂಡಿದ್ದ ಕುಶಾಲ್, ಕಿರಿಯ ವಯಸ್ಸಿನಲ್ಲಿಯೇ ಕಣ್ಮರೆಯಾಗಿರುವುದು ಪೋಷಕರ ದುಃಖಕ್ಕೆ ಕಾರಣವಾಗಿದೆ. ಹೀಗಾಗಿ ಆಸ್ಪತ್ರೆಯ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಲ್ಲದೇ, ಕುಶಾಲ್ ಸಾವನ್ನಪ್ಪಿದ ಆಸ್ಪತ್ರೆಯಲ್ಲಿಯೇ ತಾಯಿ ರೇಖಾ ಕೂಡ ಡೆಂಗ್ಯೂ ಜ್ವರದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇಖಾ ಟೈಲರ್ ವೃತ್ತಿ ಮಾಡುತ್ತಿದ್ದು, ತಂದೆ ಮಂಜುನಾಥ್ ಶಿಕ್ಷಕರಾಗಿದ್ದಾರೆ.








