ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಬುಧವಾರ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸದನದಲ್ಲಿ ಆಡಿದ ಒಂದೇ ಒಂದು ಮಾತು ಇಡೀ ಕಲಾಪದ ದಿಕ್ಕನ್ನೇ ಬದಲಿಸಿತು. ನೀವು ಕರಾವಳಿಯವರು ಬೆಂಕಿ ಹಚ್ಚುವವರು ಎಂದು ಸಚಿವರು ನೀಡಿದ ಹೇಳಿಕೆ ಕರಾವಳಿ ಭಾಗದ ಶಾಸಕರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಹೈಡ್ರಾಮಾವೇ ನಡೆಯಿತು.
ವಿವಾದದ ಕಿಡಿ ಹೊತ್ತಿದ್ದು ಹೇಗೆ?
ಸದನದಲ್ಲಿ ವಿಷಯವೊಂದರ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಬಿಜೆಪಿ ಶಾಸಕರತ್ತ ಬೊಟ್ಟು ಮಾಡಿ, ನೀವು ಕರಾವಳಿಯವರು ಬೆಂಕಿ ಹಚ್ಚುವವರು ಎಂದು ಹಗುರವಾಗಿ ಮಾತನಾಡಿದರು. ಈ ಮಾತು ಕಿವಿಗೆ ಬೀಳುತ್ತಿದ್ದಂತೆಯೇ ಬಿಜೆಪಿ ಶಾಸಕರು ಸಿಟ್ಟಿಗೆದ್ದರು. ಸಚಿವರ ಈ ಹೇಳಿಕೆ ಕೇವಲ ಶಾಸಕರಿಗೆ ಮಾತ್ರವಲ್ಲ, ಇಡೀ ಕರಾವಳಿ ಕರ್ನಾಟಕದ ಜನತೆಗೆ, ಅಲ್ಲಿನ ಸಂಸ್ಕೃತಿಗೆ ಮಾಡಿದ ಅವಮಾನ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸುನಿಲ್ ಕುಮಾರ್ ರುದ್ರಾವತಾರ
ಸಚಿವರ ಹೇಳಿಕೆಯಿಂದ ಕೆರಳಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಸಚಿವ ಸುರೇಶ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕರಾವಳಿ ಜನತೆಯ ದೇಶಭಕ್ತಿ ಮತ್ತು ಸಂಸ್ಕೃತಿಯ ಬಗ್ಗೆ ನಿಮಗೆ ಏನು ಗೊತ್ತಿದೆ? ನಮ್ಮನ್ನು ಬೆಂಕಿ ಹಚ್ಚುವವರು ಎನ್ನುತ್ತೀರಾ? ಕೂಡಲೇ ನಿಮ್ಮ ಮಾತನ್ನು ಹಿಂಪಡೆಯಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಇವರಿಗೆ ಸಾಥ್ ನೀಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಸಚಿವರ ವಿರುದ್ಧ ಧಿಕ್ಕಾರ ಕೂಗುತ್ತಾ ಸದನದಲ್ಲಿ ಗದ್ದಲ ಎಬ್ಬಿಸಿದರು.
ಸ್ಪೀಕರ್ ಖಾದರ್ ವಿರುದ್ಧವೂ ಸಿಡಿದ ಶಾಸಕರು
ವಿಷಯ ಇಷ್ಟಕ್ಕೆ ತಣ್ಣಗಾಗಲಿಲ್ಲ. ಸ್ವತಃ ಕರಾವಳಿ ಭಾಗವನ್ನು ಪ್ರತಿನಿಧಿಸುವ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಮೌನವನ್ನು ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದರು. ಮಾನ್ಯ ಅಧ್ಯಕ್ಷರೇ, ನೀವೂ ಕರಾವಳಿಯವರಲ್ಲವೇ? ಒಬ್ಬ ಸಚಿವರು ಇಡೀ ಕರಾವಳಿ ಜನರಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೆ ನೀವೇಕೆ ಸುಮ್ಮನಿದ್ದೀರಿ? ನಿಮ್ಮದೇ ಭಾಗಕ್ಕೆ ಅವಮಾನವಾಗುತ್ತಿದ್ದರೂ ಮೌನವಾಗಿದ್ದೀರಲ್ಲ, ಪೀಠದಿಂದ ಕೆಳಗೆ ಬನ್ನಿ ಎಂದು ಸವಾಲು ಹಾಕಿದರು.
ಸ್ಪೀಕರ್ ಅವರು ಆಕ್ಷೇಪಾರ್ಹ ಪದಗಳನ್ನು ಕಡತದಿಂದ ತೆಗೆದುಹಾಕುವುದಾಗಿ (Expunge) ಭರವಸೆ ನೀಡಿದರೂ, ಬಿಜೆಪಿ ಶಾಸಕರು ಶಾಂತರಾಗಲಿಲ್ಲ. ಸಚಿವರು ಕ್ಷಮೆ ಕೇಳಲೇಬೇಕೆಂದು ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು.
ಗದ್ದಲದ ನಡುವೆಯೇ ವಿಧೇಯಕ ಅಂಗೀಕಾರ, ಹರಿದು ಬಿದ್ದ ಪ್ರತಿಗಳು
ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಸರ್ಕಾರ ದ್ವೇಷ ಭಾಷಣ ತಡೆ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ವಿಧೇಯಕ ಪಾಸಾಗಿದ್ದನ್ನು ಕಂಡು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೆಂಡಾಮಂಡಲರಾದರು. ಸರ್ಕಾರದ ನಡೆಯನ್ನು ಖಂಡಿಸಿ ಸದನದಲ್ಲೇ ವಿಧೇಯಕದ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಇದು ದ್ವೇಷ ಭಾಷಣ ತಡೆಯುವ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕರಾಳ ಶಾಸನ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಒಟ್ಟಿನಲ್ಲಿ ಕರಾವಳಿ ಜನರ ಬಗ್ಗೆ ಆಡಿದ ಮಾತು ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಬಿಸಿಯನ್ನು ತಾರಕಕ್ಕೇರಿಸಿದೆ.








