ಕೆಲವರಿಗೆ ದೆಹಲಿಗೆ ಹೋಗುವ ಕಾಯಿಲೆ ಇದೆ : ವಿ.ಸೋಮಣ್ಣ ಟಾಂಗ್
ಮೈಸೂರು : ಪ್ರತಿವೊಬ್ಬರಿಗೂ ಒಂದೊಂದು ಕಾಯಿಲೆ ಇರುತ್ತದೆ. ಕೆಲವರಿಗೆ ದೆಹಲಿಗೆ ಹೋಗುವ ಕಾಯಿಲೆ, ಮತ್ತೆ ಕೆಲವರಿಗೆ ಕೆಲಸ ಮಾಡುವ ಕಾಯಿಲೆ.
ನನಗೆ ಕೊರೊನಾದಂತಹ ಈ ಸಂದರ್ಭದಲ್ಲಿ ಕೆಲಸ ಮಾಡುವ ಕಾಯಿಲೆ ಇದ್ದು, ನಾವೆಲ್ಲಾ ಕೊರೊನಾ ನಿಯಂತ್ರಣ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ಈ ರೀತಿಯ ಬೆಳವಣಿಗೆ ಸರಿಯಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಕೊರೊನಾ ಸಂಕಷ್ಟದ ಮಧ್ಯೆ ಸಿಎಂ ಬದಲಾವಣೆಗೆ ಕೆಲವರು ಕಸರತ್ತು ನಡೆಸುತ್ತಿರುವ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಿ.ಸೋಮಣ್ಣ, ಕೊರೊನಾ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವುದು, ದೆಹಲಿಗೆ ಹೋಗುವುದು ಇದಕ್ಕೆಲ್ಲಾ ಹೈಕಮಾಂಡ್ ಕಡಿವಾಣ ಹಾಕಬೇಕಾಗಿದೆ ಎಂದು ಒತ್ತಾಯಿಸಿದರು.
ಅಲ್ಲದೆ ರಾಜ್ಯದಲ್ಲಿ ಯಾರೂ ನಾಯಕತ್ವ ಬದಲಾವಣೆ ಬಗ್ಗೆ ದೆಹಲಿಗೆ ಹೋಗಿಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ನನ್ನ ಬುದ್ಧಿವಂತಿಕೆಯನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳುತ್ತಿದ್ದೇನೆ.
ಕೆಲವರು ಅವರ ಬುದ್ಧಿವಂತಿಕೆಯನ್ನು ಬೇರೆ ವಿಚಾರಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೆ ದೆಹಲಿಗೆ ಹೋಗಿದ್ದೀರಿ ಎಂಬುದನ್ನು ಅವರ ಬಳಿಯೇ ಕೇಳಿ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೆಶ್ವರ್, ಅರವಿಂದ್ ಬೆಲ್ಲದ್ ಗೆ ಟಾಂಗ್ ನೀಡಿದರು.