2022 ನೇ ಸಾಲಿನ ಅತ್ಯುತ್ತಮ ಶಾಸಕರಾಗಿ ಆರ್.ವಿ. ದೇಶಪಾಂಡೆ ಆಯ್ಕೆ….
2022ನೇ ಸಾಲಿನ ಅತ್ಯುತ್ತಮ ಶಾಸಕರಾಗಿ ಆರ್.ವಿ. ದೇಶಪಾಂಡೆ ಅವರನ್ನ ಆಯ್ಕೆ ಮಾಡಿರುವುದಾಗಿ ಅಧಿವೇಶನದ 8ನೇ ದಿನವಾದ ಬುಧವಾರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ದರು. ದೇಶಪಾಂಡೆ ಅವರನ್ನು ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶಪಾಂಡೆ ಅವರು ಅಪಾರ ಜನಪರ ಕಾಳಜಿವುಳ್ಳ ಸರಳ, ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಕೈಗಾರಿಕಾ ಸಚಿವರಾಗಿ ಕೈಗಾರಿಕೆಗಳ ಬೆಳವಣಿಗೆಗೆ ಹಾಗೂ ಕೈಗಾರಿಕಾ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ನಡೆದ ಬಂದ ದಾರಿ ನಮಗೆಲ್ಲಾ ಪ್ರೇರಣೆಯಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ಚರ್ಚೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ದೇಶಪಾಂಡೆ ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸದನದ ಗೌರವವನ್ನು ಎತ್ತಿಹಿಡಿಯುವಲ್ಲಿ ಶ್ರಮಿಸಿದ್ದಾರೆ. ಅಜಾತ ಶತ್ರು ಆಗಿರುವ ದೇಶಪಾಂಡೆ ಎಲ್ಲ ರಾಜಕಾರಣಿಗಳೊಂದಿಗೆ ಸ್ನೇಹಜೀವಿಯಾಗಿ ನಡೆದುಕೊಂಡಿದ್ದಾರೆ. ಹಲವಾರು ಖಾತೆಗಳನ್ನು ನಿಭಾಯಿಸುವ ಮೂಲಕ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಅವರು ರಾಜ್ಯದ ಒಳಿತಿಗಾಗಿ ಶ್ರಮಿಸಿದ್ದಾರೆ ಎಂದರು.
MLA R.V. Deshpande selected As a Best MLA of 2022