ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸ ಹಾಗೂ ಅಲ್ಲಿನ ಫೋಟೋ ಶೂಟ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ ವೃದ್ಧರಾಗಿದ್ದರೂ ಸಹ, ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾದ ವಿದೇಶಿ ಪ್ರಧಾನಿಗಳ ಜೊತೆ ನಡೆದುಕೊಳ್ಳುವ ರೀತಿ ಮತ್ತು ಆ ರೋಮ್ಯಾಂಟಿಕ್ ಫೋಟೋಗಳನ್ನು ನೋಡಿದರೆ ನಗು ಬರುತ್ತದೆ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ರೋಮ್ ನಗರವು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ದೊರೆ ನೀರೋ ಆರಾಮವಾಗಿ ಪಿಟೀಲು ಬಾರಿಸುತ್ತಿದ್ದನಂತೆ. ಭಾರತದ ಇಂದಿನ ಪರಿಸ್ಥಿತಿಯೂ ಹಾಗೆಯೇ ಆಗಿದೆ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಹಾಗೂ ರೈತರ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿವೆ. ಆದರೆ ನಮ್ಮ ಪ್ರಧಾನಿಗಳು ಇದೆಲ್ಲವನ್ನೂ ಮರೆತು ವಿದೇಶದಲ್ಲಿ ಮೆಲೊಡಿ ಹಂಚುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.
ದೇಶದ ರಾಜನೇ ವ್ಯಾಪಾರಿಯಾದರೆ, ಆ ದೇಶದ ಪ್ರಜೆಗಳು ಭಿಕಾರಿಗಳಾಗುತ್ತಾರೆ ಎಂಬ ಮಾತಿದೆ. ಮೋದಿ ಅವರು ಇಡೀ ದೇಶವನ್ನು ಅಂತಹ ಸ್ಥಿತಿಗೆ ತಂದಿದ್ದಾರೆ. ಜನಸಾಮಾನ್ಯರನ್ನು ಬಡತನಕ್ಕೆ ದೂಡಿರುವ ಮೋದಿ, ಕೇವಲ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ
ಇದೇ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸುತ್ತಿರುವ ಪೊಲೀಸರ ಕ್ರಮವನ್ನು ಹರಿಪ್ರಸಾದ್ ತೀವ್ರವಾಗಿ ಖಂಡಿಸಿದರು. ಪೊಲೀಸರಿಗೆ ಕನಿಷ್ಠ ಬುದ್ಧಿ ಇಲ್ಲವೇ? ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರ ಮೇಲೆ ಪ್ರಕರಣ ದಾಖಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರ ಮೇಲೆ ಕೇಸ್ ಹಾಕಿರುವುದು ಖಂಡನೀಯ. ಕರ್ನಾಟಕದ ಹಿತಕ್ಕಾಗಿ ಹಾಗೂ ನಾಡು ನುಡಿಯ ರಕ್ಷಣೆಗಾಗಿ ಹೋರಾಡುವವರ ಧ್ವನಿಯನ್ನು ಅಡಗಿಸುವುದು ಸರಿಯಲ್ಲ. ಯಾವ ಸರ್ಕಾರವೇ ಅಧಿಕಾರದಲ್ಲಿದ್ದರೂ ಹೋರಾಟಗಾರರ ಮೇಲೆ ಕೇಸ್ ದಾಖಲಿಸುವುದು ತಪ್ಪು ಎಂದು ಅವರು ಗುಡುಗಿದ್ದಾರೆ.








