ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ಜಾಮಾ ಮಸೀದಿ(Shahi Jama Masjid) ಸಮೀಕ್ಷೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಸೇರಿದಂತೆ 400 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಅಲ್ಲದೇ, ಈಗಾಗಲೇ ಪ್ರಕರಣಕ್ಕೆಸಂಬಂಧಿಸಿದಂತೆ ಸುಮಾರು 25 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಕುರತು ಸಮಾಜವಾದಿ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ಅವರ ಪಕ್ಷದ ಇಕ್ಬಾಲ್ ಮಹಮೂದ್ ಅವರ ಪುತ್ರ ನವಾಬ್ ಸುಹೇಲ್ ಇಕ್ಬಾಲ್ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಗೆಂದು ಅಧಿಕಾರಿಗಳ ತಂಡ ತೆರಳಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಘಷಣೆ ನಡೆದಿತ್ತು. ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಮತ್ತು ಲಾಠಿಚಾರ್ಜ್ ನಡೆಸಿದ್ದರು.
ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದರು.








