ಚಿತ್ರದುರ್ಗ: ತಾಯಿ- ಮಗಳು ಅನುಮಾನಾಸ್ಪದ ರೀತಿಯಲ್ಲಿ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ತುರುವನೂರು ರಸ್ತೆಯಲ್ಲಿನ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿನ ನೀರಿನ ತೊಟ್ಟಿಯಲ್ಲಿಯೇ ಬಿದ್ದು ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಇದು ಹಲವಾರು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಆಶ್ರಮದ ಪೂಜಾರಿಯಾಗಿರುವ ಸುರೇಶ್ ಪತ್ನಿ ಗೀತಾ (42) ಹಾಗೂ ಪುತ್ರಿ ಪ್ರಿಯಾಂಕಾ (20) ಮೃತದೇಹಗಳು ಆಶ್ರಮದಲ್ಲಿರುವ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿವೆ.
ಗೀತಾ ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಆಶ್ರಮದ ಗೋಡೆ ಮೇಲೆ ತಾಯಿ-ಮಗಳ ಹೆಸರಲ್ಲಿ ಬರೆದಿಟ್ಟಿದ್ದ ಡೆತ್ ನೋಟ್ ಅನುಮಾನಕ್ಕೆ ದಾರಿ ಮಾಟಿಕೊಟ್ಟಿದೆ. ಡೆತ್ ನೋಟ್ ಪರಿಶೀಲಿಸಿದ ಚಿತ್ರದುರ್ಗ ಬಡಾವಣೆ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಗೀತಾಳ ಸಹೋದರ ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ದೂರು ಸಲ್ಲಿಸಿದ್ದಾರೆ.