ನವದೆಹಲಿ ದುಬೈ ಏರ್ ಶೋನಲ್ಲಿ ಭಾರತದ ಹೆಮ್ಮೆಯ ಲಘು ಯುದ್ಧ ವಿಮಾನ ತೇಜಸ್ ಪತನಗೊಂಡು, ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ದುರಂತ ಸಾವಿಗೆ ಇಡೀ ಭಾರತವೇ ಕಣ್ಣೀರು ಹಾಕುತ್ತಿದೆ. ಆದರೆ, ಈ ದುಃಖದ ಸಮಯದಲ್ಲಿ ನೆರೆಯ ಪಾಕಿಸ್ತಾನದ ಕೆಲವು ವಿಕೃತ ಮನಸ್ಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ಲೇವಡಿ ಮಾಡುತ್ತಿವೆ. ಭಾರತದ ವೀರ ಯೋಧನ ಸಾವನ್ನು ಸಂಭ್ರಮಿಸುತ್ತಿರುವ ಪಾಕಿಸ್ತಾನಿ ಟ್ರೋಲರ್‌ಗಳಿಗೆ ಶಿವಸೇನೆ ಯುಬಿಟಿ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕಟುವಾದ ಪದಗಳಲ್ಲಿ ಚಾಟಿ ಬೀಸಿದ್ದಾರೆ.
ಸಾಲದ ಶೂಲದಲ್ಲಿ ಸಿಲುಕಿ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ ಅವರ ನೈಜ ಸ್ಥಿತಿಯನ್ನು ನೆನಪಿಸಿಕೊಟ್ಟ ಪ್ರಿಯಾಂಕಾ, ಆತ್ಮಹತ್ಯಾ ಬಾಂಬರ್‌ಗಳನ್ನು ಮಾತ್ರ ತಯಾರು ಮಾಡಲು ತಿಳಿದಿರುವ ದೇಶಕ್ಕೆ ಭಾರತದ ತಂತ್ರಜ್ಞಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಗುಡುಗಿದ್ದಾರೆ.
ಭಿಕಾರಿ ರಾಷ್ಟ್ರಕ್ಕೆ ಕನ್ನಡಿ ತೋರಿಸಿದ ಪ್ರಿಯಾಂಕಾ
ಪಾಕಿಸ್ತಾನಿ ಟ್ರೋಲರ್‌ಗಳ ವಿಕೃತ ಪೋಸ್ಟ್‌ಗಳಿಗೆ ಎಕ್ಸ್ ತಾಣದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕಾ ಚತುರ್ವೇದಿ, ಪಾಕಿಸ್ತಾನದ ಆರ್ಥಿಕ ದಿವಾಳಿತನವನ್ನು ಎತ್ತಿ ತೋರಿಸಿದರು. ನೀವು ವಾಸಿಸುತ್ತಿರುವುದು ಸ್ವಂತ ಕಾಲಿನ ಮೇಲೆ ನಿಂತಿರುವ ದೇಶದಲ್ಲಿ ಅಲ್ಲ, ಬದಲಾಗಿ ವಿಶ್ವಬ್ಯಾಂಕ್ ಮತ್ತು ಐಎಂಎಫ್ ನೀಡುವ ಸಾಲದ ಹಣದಲ್ಲಿ ಉಸಿರಾಡುತ್ತಿರುವ ದೇಶದಲ್ಲಿ ಎಂಬುದನ್ನು ಮರೆಯಬೇಡಿ. ಭಯೋತ್ಪಾದನೆಯನ್ನೇ ಉಸಿರಾಗಿಸಿಕೊಂಡಿರುವ, ಜಾಗತಿಕ ಮಟ್ಟದಲ್ಲಿ ಭಿಕಾರಿ ಎನಿಸಿಕೊಂಡಿರುವ ದೇಶದ ಪ್ರಜೆಗಳು ಭಾರತದ ಸ್ವದೇಶಿ ನಿರ್ಮಿತ ತೇಜಸ್ ಬಗ್ಗೆ ಅಪಹಾಸ್ಯ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದ್ದಾರೆ.
ಮೇಡ್ ಇನ್ ಚೀನಾ ಆಟಿಕೆಗಳು ಮತ್ತು ಸೂಸೈಡ್ ಬಾಂಬರ್ಸ್
ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯು ಚೀನಾದ ಹಂಗಿನಲ್ಲಿದೆ ಎಂಬುದನ್ನು ಪ್ರಿಯಾಂಕಾ ಚತುರ್ವೇದಿ ವ್ಯಂಗ್ಯವಾಗಿ ಪ್ರಸ್ತಾಪಿಸಿದರು. ಕೇವಲ ಮೇಡ್ ಇನ್ ಚೀನಾ ಆಟಿಕೆಗಳನ್ನು ಇಟ್ಟುಕೊಂಡು ಸಂಭ್ರಮಿಸುವ ಜನರು, ಭಾರತದ ಸ್ವದೇಶಿ ನಿರ್ಮಿತ ಫೈಟರ್ ಜೆಟ್‌ಗಳ ಬಗ್ಗೆ ಮಾತನಾಡುವ ಕೊನೆಯ ವ್ಯಕ್ತಿಯಾಗಿರಬೇಕು. ನಿಮ್ಮ ದೇಶಕ್ಕೆ ಕೇವಲ ಆತ್ಮಹತ್ಯಾ ಬಾಂಬರ್ ಸ್ಕ್ವಾಡ್‌ಗಳನ್ನು (Suicide Bombers) ರಚಿಸುವುದಷ್ಟೇ ಗೊತ್ತು. ತಾಂತ್ರಿಕವಾಗಿ ಮುಂದುವರಿದ ಯುದ್ಧ ವಿಮಾನಗಳ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ ಎಂದು ಕಟುವಾಗಿ ಟೀಕಿಸಿದರು.
ಪ್ರಿಯಾಂಕಾ ಅವರ ಮೇಡ್ ಇನ್ ಚೀನಾ ಹೇಳಿಕೆಯು ಕೇವಲ ವ್ಯಂಗ್ಯವಾಗಿರದೆ, ವಾಸ್ತವವನ್ನು ಬಿಚ್ಚಿಟ್ಟಿದೆ. ಕಳೆದ ಮೇ ತಿಂಗಳಲ್ಲಿ ಭಾರತದೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಪಾಕಿಸ್ತಾನವು ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿತ್ತು. ಪಾಕಿಸ್ತಾನವು ಚೀನಾದ PL-15, HQ-9P ಕ್ಷಿಪಣಿಗಳು ಹಾಗೂ JF-17 ಮತ್ತು J-10 ಫೈಟರ್ ಜೆಟ್‌ಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಆದರೆ ನಿರ್ಣಾಯಕ ಸಂದರ್ಭದಲ್ಲಿ ಭಾರತದ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ಚೀನಾದ ಈ ಆಟಿಕೆಗಳು ಠುಸ್ ಪಟಾಕಿಯಾಗಿದ್ದವು ಎಂಬುದನ್ನು ಅವರು ಪರೋಕ್ಷವಾಗಿ ನೆನಪಿಸಿಕೊಟ್ಟರು.
ದುಬೈ ಏರ್ ಶೋ ದುರಂತ ನಡೆದಿದ್ದು ಏನು
ದುಬೈ ಏರ್ ಶೋ 2025 ರಲ್ಲಿ ಶುಕ್ರವಾರ ಭಾರತೀಯ ವಾಯುಪಡೆಯ ಪಾಲಿಗೆ ಕರಾಳ ದಿನವಾಗಿತ್ತು. ಪ್ರದರ್ಶನದ ವೇಳೆ ಆಗಸದಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ ತೇಜಸ್ ಲಘು ಯುದ್ಧ ವಿಮಾನವು ಹಠಾತ್ ಬೆಂಕಿಗಾಹುತಿಯಾಯಿತು. ಸುಮಾರು ಎಂಟು ನಿಮಿಷಗಳ ಕಾಲ ವೈಮಾನಿಕ ಕಸರತ್ತು ನಡೆಸಿದ ನಂತರ, ವಿಮಾನದಲ್ಲಿ ದೋಷ ಕಾಣಿಸಿಕೊಂಡು ಪತನವಾಯಿತು.
ದುಬೈ ವರ್ಲ್ಡ್ ಸೆಂಟ್ರಲ್‌ನಲ್ಲಿರುವ ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನ ಬಿದ್ದ ರಭಸಕ್ಕೆ ಭಾರೀ ಪ್ರಮಾಣದ ಬೆಂಕಿ ಆವರಿಸಿತು. ವಿಮಾನವನ್ನು ಮುನ್ನಡೆಸುತ್ತಿದ್ದ ಅನುಭವಿ ಪೈಲಟ್, ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರು ಈ ದುರ್ಘಟನೆಯಲ್ಲಿ ಹುತಾತ್ಮರಾದರು. ಸ್ಥಳೀಯ ಕಾಲಮಾನ ಮಧ್ಯಾಹ್ನ 2.10ರ ಸುಮಾರಿಗೆ (ಭಾರತೀಯ ಕಾಲಮಾನ ಮಧ್ಯಾಹ್ನ 3:40) ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹೆಮ್ಮೆಯಿಂದ ತಯಾರಿಸಿದ ತೇಜಸ್ ವಿಮಾನದ ಈ ಅಪಘಾತದ ಬಗ್ಗೆ ತನಿಖೆ ಆರಂಭವಾಗಿದೆ.
ಭಾರತವು ತನ್ನ ವೀರ ಯೋಧನನ್ನು ಕಳೆದುಕೊಂಡು ಶೋಕದಲ್ಲಿರುವಾಗ, ತನ್ನ ಹೀನ ಮನಸ್ಥಿತಿಯನ್ನು ಪ್ರದರ್ಶಿಸಿದ ಪಾಕಿಸ್ತಾನಕ್ಕೆ ಭಾರತೀಯರು ಮತ್ತು ಪ್ರಿಯಾಂಕಾ ಚತುರ್ವೇದಿ ತಕ್ಕ ಪಾಠ ಕಲಿಸಿದ್ದಾರೆ.








