ಗೆದ್ದೆ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ `ಕೈ’ ಡಿಚ್ಚಿ : ಜೆಡಿಎಸ್ ಗೆ ಮೈಸೂರು ಪಾಲಿಕೆ ಗದ್ದುಗೆ
ಮೈಸೂರು : ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಟಕ್ಕರ್ ನೀಡಿದೆ. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದ ಮೈಸೂರು ಮೇಯರ್ ಚುನಾವಣೆ ಅಚ್ಚರಿ ಅಂತ್ಯ ಕಂಡಿದ್ದು, ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೈಸೂರು ಮೇಯರ್ ಚುನಾವಣೆ ಭಾರಿ ಕುತೂಹಲವನ್ನ ಕೆರಳಿಸಿತ್ತು. ಕಾಂಗ್ರೆಸ್ ಜೊತೆಗೆ ಮೈತ್ರಿ ಮುರಿದಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಘೋಷಿಸಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಎಸ್.ಟಿ.ಸೋಮಶೇಖರ್ ಸೇರಿದಂತೆ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರನ್ನ ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇತ್ತ ಕಾಂಗ್ರೆಸ್ ಮಾಜಿ ಶಾಸಕ ತನ್ವೀರ್ ಸೇಠ್ ಹಳೆ ಮೈತ್ರಿಯನ್ನ ಮುಂದುವರಿಸುವಂತೆ ಹೇಳಿದ್ದರು.
ಆದ್ರೆ ಕುಮಾರಸ್ವಾಮಿ ವಿಧಾನ ಪರಿಷತ್ ನಂತೆ ಬಿಜೆಪಿಗೆ ಬೆಂಬಲಿಸಲು ಮುಂದಾಗಿದ್ದರು. ಇದನ್ನ ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇರವಾಗಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರನ್ನು ಸಂಪರ್ಕಿಸಿ ಬೆಂಬಲ ಕೇಳಿದ್ದಾರಂತೆ.
ಇತ್ತ ಹೆಚ್ ಡಿ ದೇವೇಗೌಡರು ಕೇರಳ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವತಂತ್ರ್ಯವಾಗಿ ಕಣಕ್ಕಿಳಿಯುವಂತೆ ಸೂಚಿಸಿದ್ದು, ಮ್ಯಾಜಿಕ್ ನಂಬರ್ ಇಲ್ಲದಿದ್ದರೂ ರುಕ್ಮಿಣಿ ಮಾದೇಗೌಡರನ್ನ ಕಣಕ್ಕಿಳಿಸಿತ್ತು. ಇತ್ತ ಕಾಂಗ್ರೆಸ್, ಬಿಜೆಪಿ ಸಹ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇನ್ನೊಂದು ಕಡೆ ಹೆಚ್ಚು ಮತಗಳಿದ್ದ ಕಾರಣ ಬಿಜೆಪಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿತ್ತು. ಬಿಜೆಪಿ ನಾಯಕರು ಕೂಡ ನಾವೇ ಗೆಲ್ಲುತ್ತೇವೆ ಅಂತಾ ಹೇಳಿಕೆ ನೀಡಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜೆಡಿಎಸ್ ನ ರುಕ್ಮಿಣಿ ಮಾದೇಗೌಡರಿಗೆ ಬೆಂಬಲ ಸೂಚಿಸಿ ಬಿಜೆಪಿಗೆ ಟಕ್ಕರ್ ನೀಡಿದೆ.
