ಬೆಂಗಳೂರು: ಜಾರಿ ನಿರ್ದೇಶನಾಲಯ(ED), ಆರ್ ಬಿಐ (RBI) ಹೆಸರು ಹೇಳಿ ಕೋಟ್ಯಾಂತರ ರೂ. ವಂಚಿಸಿದ್ದ ಮಹಿಳೆ ಸೇರಿದಂತೆ ಏಳು ಜನರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚನ್ನರಾಯಪಟ್ಟಣ (Channarayapatna) ಮೂಲದ ಪ್ರಮುಖ ಆರೋಪಿ ಕಲ್ಪನಾ (47) ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಿವೃತ್ತ ಬ್ಯಾಂಕ್ ಮ್ಯಾನೇಜರ್ ನಾಗೇಶ್ವರ ರಾವ್ ಹಾಗೂ ಸುಜರಿತ ಎಂಬುವರು ತಮ್ಮ ಸಂಬಂಧಿಕರನ್ನು ಕಲ್ಪನಾಗೆ ಪರಿಚಯಿಸಿದ್ದರು. ಪರಿಚಯವಾದ ನಂತರ ಆರೋಪಿ ಕಲ್ಪನಾ, ಕುಡುಮುಡಿ ಎಂಬಲ್ಲಿ 100 ಕೋಟಿ ಆಸ್ತಿ ಇದೆ. ಕೋರ್ಟಿನಲ್ಲಿ ಕೇಸ್ ನಮ್ಮ ಪರವಾಗಿ ಆಗಿದೆ. ದಾಖಲೆಗಳನ್ನು ತೆಗೆದುಕೊಳ್ಳಲು ನನಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ತುರ್ತಾಗಿ 15 ಲಕ್ಷ ಬೇಕು ಶೇ. 3ರಷ್ಟು ಬಡ್ಡಿ ಸೇರಿಸಿ 15 ದಿನಗಳೊಳಗೆ ಮರಳಿ ಕೊಡುತ್ತೇನೆಂದು ಹೇಳಿ ಹಣ ಪಡೆದಿದ್ದಾಳೆ.
15 ದಿನಗಳ ನಂತರ ಕಲ್ಪನಾಗೆ ಹಣ ಕೇಳಿದ್ದಾರೆ. ಆಗ ಕಲ್ಪನಾ, ನೂರಾರು ಕೋಟಿ ರೂ.ಗಳಿಗೆ ಶೇ. 30ರಂತೆ 30 ಕೋಟಿ ರೂಗಳನ್ನು ಕಟ್ಟಬೇಕು. ನೀವು ನಮಗೆ ಕೊಟ್ಟಿರುವ ಹಣಕ್ಕೆ, ಅದರ ಹತ್ತು ಪಟ್ಟು ಹಣವನ್ನು ಹೆಚ್ಚುವರಿ ಕೊಡುತ್ತೇನೆ ಮತ್ತು 2 ಕೆಜಿ ಚಿನ್ನ ಮತ್ತು 20 ಕೆಜಿ ಬೆಳ್ಳಿ ವಿಗ್ರಹಗಳನ್ನು ನಿಮಗೆ ಕೊಡುತ್ತೇನೆ. ಆರ್ ಬಿಐ ಉನ್ನತ ಅಧಿಕಾರಿಗಳು ನಮ್ಮ ಜೊತೆ ಇರುತ್ತಾರೆ. ನಮ್ಮ ವ್ಯಕ್ತಿಯೇ ಇಡಿ ಇಲಾಖೆಯಲ್ಲಿದ್ದಾರೆ. ಮತ್ತಷ್ಟು ಹಣ ನೀಡಿದರೆ ಬಡ್ಡಿ ಸಮೇತ ಮರಳಿ ನೀಡುತ್ತೇವೆಂದು 4 ಕೋಟಿ ರೂ. ಹಣ ಪಡೆದಿದ್ದಾರೆ. ಆನಂತರ ಹಣ ಮರಳಿ ಕೇಳಿದ್ದಕ್ಕೆ, ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಮೋಸ ಹೋದವರು ದೂರು ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ಸೈದುಲ್ಲಾ ಅಡಾವತ್ ಮಾತನಾಡಿ, ಆರೋಪಿಗಳು ಆರ್ಬಿಐ ಮತ್ತು ಇಡಿ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿದ್ದಾರೆ. ಆರ್ಬಿಐ, ಇಡಿ ಬಳಿ ಜಪ್ತಿಯಾಗಿರುವ ಹಣವಿದೆ. ಅದು ನಮಗೆ ಬರಲಿದೆ. ನೀವು ಮೊದಲು ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಹಣಕ್ಕಿಂತ ಡಬಲ್, ತ್ರಿಬಲ್ ಹಣ ಕೊಡುತ್ತೇವೆ ಎಂದು ನಂಬಿಸಿ ವಂಚಿಸಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.