ಪುತ್ತೂರಿನ ಹೃದಯಭಾಗದಲ್ಲಿ ನೆಲೆಸಿರುವ ಮಹಾಲಿಂಗೇಶ್ವರ ದೇವಾಲಯ, ಕೇವಲ ಪೂಜೆ ಸಲ್ಲಿಸುವ ತಾಣವಲ್ಲ. ಇದು ಭಕ್ತಿಯ, ಶ್ರದ್ಧೆಯ, ಶಾಂತಿಯ, ಸಂಸ್ಕೃತಿಯ ಸಂಕೇತ. ಇತಿಹಾಸದಲ್ಲಿ ಬಹುಶಃ ಇಷ್ಟೊಂದು ಭಕ್ತಿಯಿಂದ ಕೂಡಿದ ಮತ್ತು ಆಧ್ಯಾತ್ಮಿಕ ಶಕ್ತಿ ಹರಡಿರುವ ತಾಣ ವಿರಳ. ಈ ದೇವಾಲಯದ ಹಿಂದಿದೆ ಒಂದು ಭಾವನಾತ್ಮಕ ಕಥೆ – ಶಿವನ ನಂದಿವಾಹನವಾದ ವೃಷಭನ ಕಥೆ…
ಪ್ರಾಚೀನ ಕಾಲದಲ್ಲಿ ಶಿವನ ಪ್ರೀತಿಪಾತ್ರನಾದ ನಂದಿವಾಹನ – ವೃಷಭ, ರಾತ್ರಿ ಹೊತ್ತು ಹತ್ತಿರದ ಗದ್ದೆಗಳಿಗೆ ಇಳಿದು ಬೆಳೆಯನ್ನೆಲ್ಲ ಮೇಯುತ್ತಿದ್ದ. ಈ ಬೆಳೆಯ ನಾಶದಿಂದ ಕಂಗಾಲಾದ ರೈತರು ಒಂದು ದಿನ ನಂದಿಯನ್ನು ಹೊಡೆಯಲು ಕಾದು ಕುಳಿತರು. ನಂದಿ ಎಂದಿನಂತೆ ಬಂದು ಗದ್ದೆಯಲ್ಲಿ ಮೇಯುತ್ತಿದ್ದಾಗ ಅದನ್ನು ಬೆನ್ನಟ್ಟಿದ ರೈತರು ಅದರ ಹಿಂಗಾಲನ್ನು ಕತ್ತರಿಸಿ ಹಾಕಿದ್ರು. ನಂದಿಯ ಅರ್ಧ ಕಾಲು ಹೊಲದಲ್ಲೇ ಬಿದ್ದು ಹೋಗುತ್ತದೆ. ನೋವಿನಿಂದ ನಂದಿ ಕುಂಟುತ್ತಾ ಶಿವನ ಬಳಿಗೆ ಬರುತ್ತದೆ.
ನಂದಿ ಶಿವನ ಎದುರು ಮಲಗಿ ಮೌನವಾಗಿ ತನ್ನ ನೋವನ್ನು ಕಣ್ಣೀರು ಸುರಿಸುತ್ತಾ ಹೇಳಿಕೊಳ್ಳುತ್ತದೆ. ಶಿವನಿಗೆ ನಂದಿಯ ವೇದನೆಯ ದೃಶ್ಯ ನೋಡಿ ನೋವಾಗುತ್ತದೆ. ಅವನು ತನ್ನ ಪ್ರಾಣಸಖ ನಂದಿಗೆ ಶಾಶ್ವತ ನಿಲಯ ಕೊಡಲು ನಿರ್ಧರಿಸುತ್ತಾನೆ. ಈಗಿನಿಂದ ನೀನು ನನ್ನ ದರ್ಶನಕ್ಕೆ ಬಂದ ಭಕ್ತರಿಗೆ ಅನುಗ್ರಹ ನೀಡುವೆ ಎಂದು ಹೇಳುತ್ತಾ ನಂದಿಯನ್ನು ಕಲ್ಲಿನ ರೂಪದಲ್ಲಿ ತನ್ನ ಎದುರು ಸ್ಥಿರಗೊಳಿಸುತ್ತಾನೆ.
ಇವತ್ತಿಗೂ ಮಹಾಲಿಂಗೇಶ್ವರ ದೇವಾಲಯದ ಒಳಗಡೆ ಮೂರುವರೆ ಕಾಲು ಹೊಂದಿರುವ ನಂದಿಮೂರ್ತಿ ಕಂಡುಬರುತ್ತದೆ. ಅದರ ಎದುರೇ, ದೇವಾಲಯದ ಎದುರಿನ ಗದ್ದೆಯಲ್ಲಿ ಅರ್ಧ ಕಾಲಿನ ಶಿಲೆ (ಕಲ್ಲು) ಇದೆ. ಜನರು ಈ ಎರಡನ್ನೂ ಒಂದೇ ನಂದಿಯ ಭಾಗವೆಂದು ಭಾವಿಸುತ್ತಾರೆ.
ಶಿಲಾಮಯ ನಂದಿ – ಭಕ್ತಿಯ ಪ್ರತೀಕ
ಇತರ ದೇವಸ್ಥಾನಗಳಲ್ಲಿ ನಾವು ಕಾಣುವ ನಂದಿಗೆ ಭಿನ್ನವಾಗಿ ಇಲ್ಲಿ ನಂದಿಗೆ ಮೂರುವರೆ ಕಾಲುಗಳಿವೆ. ಇದು ಕೇವಲ ಶಿಲ್ಪಶೈಲಿಯ ಅಂಶವಲ್ಲ – ಇದು ನಂಬಿಕೆಯ ಸಂಕೇತ. ಈ ನಂದಿಯಲ್ಲಿ ಮೊರೆ ಹೋದವರು ತಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡಿದಾರೆ ಎಂದು ನೂರಾರು ಕಥೆಗಳು ಹೇಳುತ್ತೆ.
ದಂತಕಥೆಗಳ ಪ್ರಕಾರ, ಆ ಸಂದರ್ಭದಲ್ಲಿ ಮಹಾಲಿಂಗೇಶ್ವರನ ದೇವಾಲಯದಲ್ಲಿ ಜೀವಂತ ವೃಷಭವೊಂದು ಇತ್ತು. ಮೇಯಲು ಹೋಗಿ ಬಂದು ಅದು ದೇವಾಲಯದಲ್ಲಿಯೇ ಇರುತ್ತಿತ್ತು. ಆದರೆ ನಂದಿಗೆ ಕಲ್ಲಿನ ರೂಪ ಕೊಟ್ಟ ಬಳಿಕ ದೇವಾಲಯದ ಒಳಗಿದ್ದ ಆ ಜೀವಂತ ವೃಷಭ ಮಾಯವಾಗುತ್ತದೆ. ದೇವರು ಕಲ್ಲಾಗಿಸಿದ ನಂದಿಯೇ ಅದು. ಅದೀಗ ಆತ್ಮರೂಪದಲ್ಲಿ ದೇವರ ಬಳಿ ಇದೆ ಎಂದು ಇಂದಿಗೂ ಜನರು ನಂಬಿದ್ದಾರೆ
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ ಶ್ರದ್ಧಾ ಹಾಗೂ ಶಾಂತಿಯ ತಾಣ. ಈ ದೇವಾಲಯದ ವಾತಾವರಣ ಸದಾ ಶಾಂತ. ಇಲ್ಲಿಗೆ ಬಂದವರ ಮನಸ್ಸು ತಕ್ಷಣವೇ ನೆಮ್ಮದಿಯನ್ನು ಕಂಡುಕೊಳ್ಳುತ್ತದೆ. ಸಂಕಷ್ಟದಲ್ಲಿ ಸಿಲುಕಿದವರು, ಜೀವನದಲ್ಲಿ ದಿಕ್ಕಿಲ್ಲದವರು ಇಲ್ಲಿಗೆ ಭಕ್ತಿಯಿಂದ ಬಂದು ನಿಜವಾದ ಆಂತರಿಕ ಶಾಂತಿಯ ಅನುಭವವನ್ನು ಪಡೆದುಹೋಗುತ್ತಾರೆ.
ಇವತ್ತಿಗೂ ಈ ದೇವಾಲಯಕ್ಕೆ ಬರುವ ಭಕ್ತರು, ಮೊದಲು ನಂದಿಗೆ ನಮಸ್ಕರಿಸುತ್ತಾರೆ. ಅದು ಭಯದಿಂದ ಅಲ್ಲ – ಭಕ್ತಿಯಿಂದ. ನಂದಿ ದೇವರ ಮುಂದೆ ಕುಳಿತಿರುವ ಶ್ರದ್ಧಾ ರೂಪ. ಶಿವನು ನಂದಿಯನ್ನು ಕಲ್ಲು ಮಾಡಿದರೂ, ಅದನ್ನು ಅವನ ಭಾಗವೆಂದು ಭಕ್ತರು ಆರಾಧಿಸುತ್ತಾರೆ.
ಇಂತಹ ನಂಬಿಕೆಯುಳ್ಳ ನಂದಿಯನ್ನು ಹೊಂದಿರುವ ಮಹಾಲಿಂಗೇಶ್ವರ ದೇವಾಲಯ, ಕೇವಲ ಪುತ್ತೂರಿನ ಹೃದಯವಲ್ಲ – ಇದು ಭಕ್ತಿಯ ಜೀವಾಳ. ಇಲ್ಲಿ ನಿಂತರೆ ಇಂದ್ರಿಯಗಳು ಶಾಂತವಾಗುತ್ತವೆ, ಹೃದಯ ಶುದ್ಧವಾಗುತ್ತದೆ.
ಇದು ನಂದಿಯ ಕಥೆ ಅಲ್ಲ – ಇದು ಭಕ್ತಿಯ ನಿತ್ಯ ಸತ್ಯ!








