ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮತ್ತು ಅಮುಲ್ ಹಾಲು ಉತ್ಪನ್ನಗಳ ಕಿಯಾಸ್ಕ್‌ಗಳನ್ನು ಸ್ಥಾಪಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ ಬಳಿಕ, ಈ ವಿಚಾರವು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿಟಿ ರವಿ, ನಂದಿನಿ ಮತ್ತು ಅಮುಲ್ ಎರಡೂ ನಮ್ಮದೇ. ನಾನು ಇದರಲ್ಲಿ ರಾಜಕೀಯ ಮಾಡಲಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
DK ಶಿವಕುಮಾರ್ ಹೇಳಿದ್ದೇನು?
ನಮ್ಮ ಮೆಟ್ರೋ ನಿಲ್ದಾಣಗಳ ಪೈಕಿ 80% ಕಿಯಾಸ್ಕ್‌ಗಳಲ್ಲಿ ನಂದಿನಿ ಹಾಲು ಉತ್ಪನ್ನಗಳು ಲಭ್ಯವಾಗುತ್ತವೆ. ಉಳಿದ 20% ಕಿಯಾಸ್ಕ್‌ಗಳಲ್ಲಿ ಅಮುಲ್ ಉತ್ಪನ್ನಗಳು ಇರಲಿವೆ ಎಂದು ಡಿಕೆಶಿ ವಿವರಿಸಿದ್ದರು.
ಸಿಟಿ ರವಿ ಪರಿಪಕ್ವ ಪ್ರತಿಕ್ರಿಯೆ
ಈ ವಿಚಾರದಲ್ಲಿ ಭಿನ್ನ ಧ್ವನಿಗಳು ಕೇಳಿಬರುತ್ತಿರುವಾಗ, ಸಿಟಿ ರವಿ ನೀಡಿರುವ ಪ್ರತಿಕ್ರಿಯೆ ಗಮನ ಸೆಳೆಯುತ್ತಿದೆ. ನಂದಿನಿ ಒಂದು ರಾಜ್ಯ ಮಟ್ಟದ ರೈತರ ಸಹಕಾರಿ ಸಂಘ. ಅಮುಲ್ ದೇಶ ಮಟ್ಟದ ಸಂಸ್ಥೆ. ಎರಡೂ ಸಹ ರೈತರ ಜೀವನದ ಭಾಗ. ಇವುಗಳಲ್ಲಿ ಯಾವುದನ್ನೂ ವಿರೋಧಿಸುವ ಕಾರಣವಿಲ್ಲ. ತಾನು ಇದರಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಆರೋಗ್ಯಕರ ಸ್ಪರ್ಧೆ ಅನಿವಾರ್ಯ
ಹಾಲು ಮತ್ತು ಹಾಲು ಉತ್ಪನ್ನಗಳ ಉತ್ತಮ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆ, ಗ್ರಾಹಕನ ವಿಶ್ವಾಸ – ಇವೆಲ್ಲವೂ ಮುಖ್ಯ. ನಂದಿನಿ ಮತ್ತು ಅಮುಲ್ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು. ಎರಡೂ ಸಂಸ್ಥೆಗಳು ರೈತರ ಜೀವನಮಟ್ಟ ಎತ್ತಲು ಶ್ರಮಿಸುತ್ತಿವೆ ಎಂದು ಸಿಟಿ ರವಿ ಅಭಿಪ್ರಾಯಪಟ್ಟರು.