ಭಾರತಕ್ಕೆ ಪೋಪ್ ಫ್ರಾನ್ಸಿಸ್ ಅವರನ್ನು ಆಹ್ವಾನಿಸಿದ ಮೋದಿ..!
G – 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರೋಮ್ ನಲ್ಲಿ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಮತ್ತು ಪ್ರಧಾನಿ ಮೋದಿ ಅವರ ನಡುವೆ ಸುಮಾರು 20 ನಿಮಿಷಗಳ ಕಾಲ ಮಾತುಕತೆಗೆ ಸಮಯ ನಿಗದಿಯಾಗಿತ್ತು. ಆದರೆ ಇವರಿಬ್ಬರು ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆಂದು ವರದಿಯಾಗಿದೆ.
ಉಭಯ ನಾಯಕರು ಬಡತನ ನಿರ್ಮೂಲನೆ, ಕೊರೊನಾ, ಹವಾಮಾನ ವೈಪರೀತ್ಯ, ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಚರ್ಚೆ ವೇಳೆ ಮೋದಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್, ವಿದೇಶಾಂಗ ಸಚಿವರಾದ ಡಾ. ಎಸ್ ಜೈಶಂಕರ್ ಜೊತೆಗಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿ ಅವರು, ಪೋಪ್ ಫ್ರಾನ್ಸಿಸ್ ಅವರೊಂದಿಗೆ ಸೌಹಾರ್ದಯುತವಾದ ಭೇಟಿ ನಡೆಸಿದ್ದೇವೆ. ಅವರೊಂದಿಗೆ ಮಾತುಕತೆ ನಡೆಸಲು ಒಂದು ಅವಕಾಶ ಸಿಕ್ಕಿತು. ಈ ವೇಳೆ ಅವರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.