ಕೇಂದ್ರ ಸರ್ಕಾರದ ಲೇಬರ್ ಕೋಡ್ ರದ್ದುಪಡಿಸಬೇಕು, ಖಾಸಗೀಕರಣಕ್ಕೆ ಬ್ರೇಕ್ ಹಾಕಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ, ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಮೇ 20 ರಂದು ದೇಶಾದ್ಯಂತ ಮುಷ್ಕರ ಗೆ ಕರೆ ನೀಡಿವೆ.
ಪ್ರಮುಖ ಬೇಡಿಕೆಗಳು:
ಕನಿಷ್ಠ ವೇತನವನ್ನು ₹26,000ಕ್ಕೆ ಹೆಚ್ಚಿಸುವುದು.
EPS (Employee Pension Scheme) ಅಡಿಯಲ್ಲಿ ಕಾರ್ಮಿಕರಿಗೆ ₹9,000 ಪಿಂಚಣಿ ನೀಡುವುದು.
ಭಾರತೀಯ ಕಾರ್ಮಿಕ ಸಮ್ಮೇಳನದ (Indian Labour Conference) ಮೂಲಕ ಕಾರ್ಮಿಕರೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುವುದು.
ಈ ಮುಷ್ಕರದ ಬೆನ್ನಲ್ಲೇ, ಮುಂದಿನ 2 ತಿಂಗಳುಗಳ ಕಾಲ ಎಲ್ಲಾ ರಾಜ್ಯಗಳಲ್ಲಿ ಕಾರ್ಮಿಕರ ಹಕ್ಕುಗಳ ಕುರಿತ ಅಭಿಯಾನ ನಡೆಸಲಾಗುವುದು ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಕೆಂದ್ರದ ನೀತಿಗಳ ವಿರುದ್ಧ ಪ್ರತಿಭಟನೆ
ಕೇಂದ್ರ ಸರ್ಕಾರದ ವಿವಿಧ ನೀತಿಗಳು ಕಾರ್ಮಿಕರಿಗೆ ಅನುಕೂಲಕರವಾಗಿಲ್ಲ ಎಂಬ ಕಾರಣಕ್ಕೆ, ಮುಷ್ಕರ ಅನಿವಾರ್ಯವಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಸ್ಪಷ್ಟಪಡಿಸಿವೆ. ಲೇಬರ್ ಕೋಡ್ ಜಾರಿಗೆ ಬಂದ ಬಳಿಕ ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ, ಖಾಸಗೀಕರಣದ ಮುನ್ಸೂಚನೆಗಳು ಕಾರ್ಮಿಕವರ್ಗದ ಭವಿಷ್ಯವನ್ನು ಅಪಾಯಕ್ಕೆ ತರುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.
ನಮ್ಮ ಹಕ್ಕುಗಳಿಗಾಗಿ ಹೋರಾಟ
ಈ ಪ್ರತಿಭಟನೆಗೆ ಅಖಿಲ ಭಾರತ ಟ್ರೇಡ್ ಯೂನಿಯನ್ ಒಕ್ಕೂಟಗಳು, ಕಾರ್ಮಿಕ ಸಂಘಟನೆಗಳು, ಮತ್ತು ವಿವಿಧ ಉದ್ಯೋಗಪರ ಸಂಘಗಳು ಬೆಂಬಲ ಸೂಚಿಸಿವೆ. ಮೇ 20ರಂದು ನಡೆಯುವ ಮುಷ್ಕರವು ಟ್ರಾನ್ಸ್ಪೋರ್ಟ್, ಬ್ಯಾಂಕಿಂಗ್, ಕೈಗಾರಿಕೆ, ತಯಾರಿಕಾ ಕ್ಷೇತ್ರ, ಮತ್ತು ಸರ್ಕಾರೀ-ಅರೆ ಸರ್ಕಾರಿ ಉದ್ಯೋಗಿಗಳನ್ನು ಪ್ರಭಾವಿತ ಮಾಡಬಹುದು.
ಕಾರ್ಮಿಕ ಹಕ್ಕುಗಳ ಸಂರಕ್ಷಣೆಗೆ ಒತ್ತಾಯಿಸಿ, ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದೇ ಈ ಮುಷ್ಕರದ ಪ್ರಧಾನ ಉದ್ದೇಶವಾಗಿದೆ.