ನೀಟ್ ಎಕ್ಸಾಂ ನಾಲ್ಕು ತಿಂಗಳು ಮುಂದೂಡಿಕೆ
ನವದೆಹಲಿ : ದೇಶದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಕಾರಣ ನೀಟ್ ಎಕ್ಸಾಂ ಅನ್ನು ಕೇಂದ್ರ ಸರ್ಕಾರ ನಾಲ್ಕು ತಿಂಗಳು ಮುಂದೂಡಿಕೆ ಮಾಡಿದೆ.
ದೇಶದಲ್ಲಿ ಸದ್ಯ ಕೊರೊನಾ ರುದ್ರ ತಾಂಡವವಾಡುತ್ತಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಇನ್ನೂ ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ವಿಷಮವಾಗಿದೆ.
ಕೆಲ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ದೇಶದಾದ್ಯಂತ ಮತ್ತೆ ಲಾಕ್ ಡೌನ್ ಘೋಷಣೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಇನ್ನೂ ಕೆಲ ತಿಂಗಳುಗಳ ಕಾಲ ಪರಿಸ್ಥಿತಿ ಹೀಗೆ ಇರುವ ಸಾಧ್ಯತೆಯನ್ನು ಅರಿತ ಕೇಂದ್ರ ಸರ್ಕಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಯುವ ಈ ಬಾರಿಯ ರಾಷ್ಟ್ರೀಯ ಪ್ರವೇಶ ಪರೀಕ್ಷೆಯನ್ನು 4 ತಿಂಗಳು ಮುಂದೂಡಿಕೆ ಮಾಡಿದೆ.
ಈ ಕುರಿತು ತಿಳಿಸಿರುವ ಕೇಂದ್ರ ಸರ್ಕಾರ, ಕೋವಿಡ್-19 ವಿರುದ್ಧ ಹೋರಾಡಲು ವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ, ನೀಟ್ ಪಿಜಿ ಪರೀಕ್ಷೆಯನ್ನು ಕನಿಷ್ಠ 4 ತಿಂಗಳವರೆಗೆ ಮುಂದೂಡಲಾಗುವುದು ಎಂದು ತಿಳಿಸಿದೆ.
ಈ ಮೊದಲು ಏಪ್ರಿಲ್ 18 ರಂದು ನೀಟ್ ಪರೀಕ್ಷೆ ನಿಗದಿಯಾಗಿತ್ತು.