ವಿಶ್ವಕಪ್ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡುವಂತೆ ಮನವಿ ಮಾಡಲಾಗಿದ್ದು, 3-4 ದಿನಗಳಲ್ಲಿ ಹೊಸ ವೇಳಾಪಟ್ಟಿ ಪ್ರಕಟಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಕ್ರಿಕೆಟ್ ಸಂಸ್ಥೆಗಳ ಜೊತೆ ವಿಶ್ವಕಪ್ ಸಿದ್ಧತೆಯ ಅವಲೋಕನಕ್ಕಾಗಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾ, ಮೂರು ರಾಷ್ಟ್ರಗಳು ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡುವಂತೆ ಐಸಿಸಿಗೆ ಮನವಿ ಸಲ್ಲಿಸಿವೆ. ಸ್ಥಳ ಬದಲಾವಣೆ ಮಾಡುವುದಿಲ್ಲ. ಕೆಲ ತಂಡಗಳಿಗೆ ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ 6 ದಿನಗಳ ಅಂತರವಿದೆ.
ಯಾವ ಕ್ರಿಕೆಟ್ ಬೋರ್ಡ್ಗಳು ಐಸಿಸಿಗೆ ಮನವಿ ಸಲ್ಲಿಸಿವೆ ಎನ್ನುವುದನ್ನು ಬಹಿರಂಗಗೊಳಿಸಲಿಲ್ಲ. ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ದೇಶದ 10 ಸ್ಟೇಡಿಯಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿವೆ ಎಂದು ಹೇಳಿದ್ದಾರೆ.
46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳಾದ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಲಿವೆ.