ತಿರುವನಂತಪುರಂ: ರಾಜ್ಯದಲ್ಲಿ ಡೆಂಗ್ಯೂ ಆತಂಕ ಹೆಚ್ಚಾಗಿದೆ. ಈ ಮಧ್ಯೆ ನಿಫಾ ಹೆಸರು ಕೂಡ ಕೇಳಿ ಬರುತ್ತಿದೆ. ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ಸೋಂಕು ತಗುಲಿದ್ದು, ದೇಶದಲ್ಲಿ ಆತಂಕ ಮನೆ ಮಾಡುತ್ತಿದೆ.
ಹೀಗಾಗಿ ನಿಪಾ ವೈರಸ್ ಹರಡುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮಲಪ್ಪುರಂನಲ್ಲಿರುವ ಸರ್ಕಾರಿ ತಂಗುದಾಣದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಈಗಾಗಲೇ ಸೋಂಕಿತ ಬಾಲಕನ ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಲಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನ ಸ್ಥಿತಿ ಗಂಭೀರವಾಗಿದೆ. ಆತನನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಪಕ್ಕದ ರಾಜ್ಯವಾಗಿರುವ ಕರ್ನಾಟಕದಲ್ಲಿ ಕೂಡ ಆತಂಕ ಮನೆ ಮಾಡಿದೆ. ಈಗಾಗಲೇ ಡೆಂಗ್ಯೂ ಹಾಗೂ ಮಳೆಯಿಂದ ತತ್ತರಿಸಿರುವ ರಾಜ್ಯಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.








