ಮೈಸೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ (Channapatna By_election) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪರ್ಧಿಸುತ್ತಿಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ (Sa Ra Mahesh) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ನಿಖಿಲ್ ಸ್ಪಷ್ಟ ಪಡಿಸಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅಭಿಪ್ರಾಯ ಕೂಡ ನಿಖಿಲ್ ಸ್ಪರ್ಧಿಸುವುದು ಬೇಡ ಅನ್ನುವುದೇ ಆಗಿದೆ. ಅಲ್ಲದೇ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿಖಿಲ್ ಕೂಡ ಮನಸ್ಸು ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ, ಪಕ್ಷದಲ್ಲಿ ನಿಖಿಲ್ ಸ್ಪರ್ಧೆ ಕುರಿತು ಒತ್ತಡವಿದೆ. ಸ್ವತಃ ಚನ್ನಪಟ್ಟಣದ ಕಾರ್ಯಕರ್ತರು ಕೂಡ ನಿಖಿಲ್ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದಾರೆ. ಆದರೆ, ನಿಖಿಲ್ ಮಾತ್ರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುವುದಾಗಿ ಸಿ.ಪಿ ಯೋಗೇಶ್ವರ್ ಘೋಷಿಸಿಕೊಂಡಿದ್ದಾರೆ. ಪಕ್ಷ ಟಿಕೆಟ್ ನೀಡದಿದ್ದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಮೈತ್ರಿ ಪಕ್ಷಗಳಲ್ಲಿ ಚರ್ಚೆಗಳು ನಡೆದಿದ್ದವು. ಕುಮಾರಸ್ವಾಮಿ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಿದ್ದಂತೆ ಈ ವಿಚಾರ ಮುನ್ನೆಲೆಗೆ ಬಂದಿತ್ತು. ಈ ವೇಳೆ ನಾವು ಟಿಕೆಟ್ ಹಂಚಿಕೆಗೆ ಒತ್ತಡ ಹಾಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.