ಬೆಂಗಳೂರು: ರಾಜ್ಯದಲ್ಲಿ ಕಾನೂನು ಪಾಲಿಸುವ ಪ್ರಾಮಾಣಿಕ ಮಧ್ಯಮ ವರ್ಗದ ಜನರಿಗೆ ಬೆಲೆಯೇ ಇಲ್ಲದಂತಾಗಿದೆಯೇ? ಹೀಗೊಂದು ಗಂಭೀರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಸ್ವಂತ ಸೂರು ಹೊಂದುವ ಕನಸು ಹೊತ್ತು, ಸರ್ಕಾರದ ನಿಯಮದಂತೆ ಅರ್ಜಿ ಸಲ್ಲಿಸಿ, ವರ್ಷಗಟ್ಟಲೆ ಕಚೇರಿಗಳಿಗೆ ಅಲೆದಾಡಿದರೂ ಮನೆ ಸಿಗುತ್ತಿಲ್ಲ. ಆದರೆ, ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದವರಿಗೆ ಮಾತ್ರ ಕೇವಲ ಎರಡೇ ವಾರದಲ್ಲಿ ಫ್ಲ್ಯಾಟ್ ಭಾಗ್ಯ ಕಲ್ಪಿಸುವ ಮೂಲಕ ಸರ್ಕಾರ ವಿಚಿತ್ರ ಹಾಗೂ ಆಘಾತಕಾರಿ ಆದ್ಯತೆಯನ್ನು ಪ್ರದರ್ಶಿಸಿದೆ.
ಕೋಗಿಲು ಲೇಔಟ್‌ನಲ್ಲಿ ನಡೆದಿರುವ ಈ ಘಟನೆ, ರಾಜ್ಯದ ವಸತಿ ಯೋಜನೆಗಳ ಅಸಲಿ ಮುಖವಾಡವನ್ನು ಕಳಚಿದ್ದು, ಪ್ರಾಮಾಣಿಕ ಅರ್ಜಿದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ರಮ ಒತ್ತುವರಿದಾರರಿಗೆ ರೆಡ್ ಕಾರ್ಪೆಟ್ ಸ್ವಾಗತ
ಸಾಮಾನ್ಯವಾಗಿ ಬಡವರು ಅಥವಾ ಮಧ್ಯಮ ವರ್ಗದವರು ಸರ್ಕಾರಿ ವಸತಿ ಯೋಜನೆಗೆ ಆಯ್ಕೆಯಾಗಲು ಹತ್ತಾರು ದಾಖಲೆಗಳನ್ನು ನೀಡಿ, ವರ್ಷಗಟ್ಟಲೆ ಕಾಯಬೇಕು. ಆದರೆ, ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದವರಿಗೆ ಸರ್ಕಾರವೇ ಮುಂದೆ ನಿಂತು ರತ್ನಗಂಬಳಿ ಸ್ವಾಗತ ನೀಡಿದೆ. ಒತ್ತುವರಿದಾರರನ್ನು ಅಲ್ಲಿಂದ ತೆರವುಗೊಳಿಸುವ ನೆಪದಲ್ಲಿ, ಅವರಿಗೆ ಕೇವಲ ಎರಡೇ ವಾರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಇವರಿಗೆ ಕೇವಲ ಮನೆ ನೀಡಿದ್ದಲ್ಲದೆ, ಸರ್ಕಾರವೇ ಬ್ಯಾಂಕ್ ಸಾಲ ಮತ್ತು ಸಬ್ಸಿಡಿ ಸೌಲಭ್ಯವನ್ನೂ ಒದಗಿಸಿಕೊಟ್ಟಿದೆ. ಮಾರುಕಟ್ಟೆಯಲ್ಲಿ ಸುಮಾರು 11.20 ಲಕ್ಷ ರೂಪಾಯಿ ಬೆಲೆಬಾಳುವ ಫ್ಲ್ಯಾಟ್‌ಗಳನ್ನು, ಈ ಒತ್ತುವರಿದಾರರಿಗೆ ಕೇವಲ 1.75 ಲಕ್ಷದಿಂದ 2.75 ಲಕ್ಷ ರೂಪಾಯಿಗಳ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗಿದೆ. ಕಾನೂನು ಮುರಿದವರಿಗೆ ಸರ್ಕಾರವೇ ರಿಯಾಯಿತಿ ದರದಲ್ಲಿ ಬಹುಮಾನ ನೀಡಿದಂತಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಹಣವಿದ್ದರೂ ಮನೆ ಇಲ್ಲ: ಅರ್ಹರ ಗೋಳು
ಒಂದೆಡೆ ಒತ್ತುವರಿದಾರರಿಗೆ ಇಷ್ಟು ತ್ವರಿತಗತಿಯಲ್ಲಿ ಸೂರು ಸಿಗುತ್ತಿದ್ದರೆ, ಮತ್ತೊಂದೆಡೆ ರಾಜೀವ್ ಗಾಂಧಿ ವಸತಿ ನಿಗಮದ ನಿಯಮಗಳನ್ನು ನಂಬಿ ಅರ್ಜಿ ಹಾಕಿದವರು ಕಣ್ಣೀರು ಹಾಕುತ್ತಿದ್ದಾರೆ. ಸಾವಿರಾರು ಅರ್ಜಿದಾರರು, ನಿಗಮ ನಿಗದಿಪಡಿಸಿರುವ ಪೂರ್ಣ ಮೊತ್ತವಾದ 11.20 ಲಕ್ಷ ರೂಪಾಯಿಗಳನ್ನು ಪಾವತಿಸಲು ಸಿದ್ಧರಿದ್ದೇವೆ. ನಮಗೆ ಯಾವುದೇ ರಿಯಾಯಿತಿ ಬೇಡ, ನ್ಯಾಯಯುತವಾಗಿ ಮನೆ ಹಂಚಿಕೆ ಮಾಡಿ ಎಂದು ಅಂಗಲಾಚುತ್ತಿದ್ದಾರೆ.
ಆದರೆ, ಎರಡು ವರ್ಷಗಳಿಂದ ಕಾಯುತ್ತಿರುವ ಇವರಿಗೆ ಸರ್ಕಾರದಿಂದ ಸಿಕ್ಕಿದ್ದು ಬರೀ ಭರವಸೆಗಳು ಮಾತ್ರ. ಹಣ ಪಾವತಿಸಲು ಸಿದ್ಧರಿದ್ದರೂ, ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಿದ್ದರೂ ಇವರನ್ನು ಕಡೆಗಣಿಸಿ, ಅಕ್ರಮ ಎಸಗಿದವರಿಗೆ ಮಣೆ ಹಾಕುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಯಕ್ಷಪ್ರಶ್ನೆಯಾಗಿದೆ.
ಅಂಕಿ ಅಂಶಗಳು ಬಿಚ್ಚಿಟ್ಟ ಕಟು ಸತ್ಯ
ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂಕಿ-ಅಂಶಗಳನ್ನು ನೋಡಿದರೆ ಎಂಥವರಿಗೂ ಆಘಾತವಾಗುತ್ತದೆ. ಸೆಪ್ಟೆಂಬರ್ 2021 ರಿಂದ ಮಾರ್ಚ್ 2026ರ ಯೋಜನಾ ಅವಧಿಯವರೆಗೆ ವಸತಿಗಾಗಿ ಬರೋಬ್ಬರಿ 73,375 ಜನರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಅಧಿಕಾರಿಗಳು ಮತ್ತು ವ್ಯವಸ್ಥೆಯ ಜಡತ್ವ ಎಷ್ಟಿದೆ ಎಂದರೆ, ನಾನಾ ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಒಡ್ಡಿ ಬರೋಬ್ಬರಿ 57,415 ಬಡವರ ಅರ್ಜಿಗಳನ್ನು ನಿರ್ದಯವಾಗಿ ತಿರಸ್ಕರಿಸಲಾಗಿದೆ. ಕೇವಲ 15,960 ಜನರನ್ನು ಮಾತ್ರ ಅರ್ಹರೆಂದು ಗುರುತಿಸಲಾಗಿದೆ. ಮುಂಗಡ ಹಣ ಪಾವತಿಸಿ, ಎಲ್ಲ ದಾಖಲೆಗಳನ್ನು ಸರಿಯಾಗಿ ಹೊಂದಿದ್ದರೂ ಸಹ ಕ್ಷುಲ್ಲಕ ಕಾರಣ ನೀಡಿ ಅರ್ಜಿಗಳನ್ನು ತಳ್ಳಿಹಾಕುತ್ತಿರುವುದು ಬಡವರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಾಮಾಣಿಕತೆಗಿಲ್ಲ ಬೆಲೆ
ತೆರಿಗೆ ಪಾವತಿಸಿ, ಸರ್ಕಾರದ ನೀತಿ ನಿಯಮಗಳನ್ನು ಗೌರವಿಸುವ ನಾಗರಿಕರಿಗಿಂತ, ಸರ್ಕಾರಿ ಜಾಗವನ್ನು ಕಬಳಿಸುವವರಿಗೇ ಹೆಚ್ಚು ಸವಲತ್ತು ಸಿಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗುವುದಿಲ್ಲವೇ? ಕಾನೂನು ಉಲ್ಲಂಘಿಸಿದವರಿಗೆ ಸಿಗುವ ಆದ್ಯತೆ, ಕಾನೂನು ಪಾಲಿಸುವವರಿಗೆ ಏಕೆ ಸಿಗುತ್ತಿಲ್ಲ? ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ವರ್ಷಗಳಿಂದ ಕಾಯುತ್ತಿರುವ ಅರ್ಹ ಬಡ ಅರ್ಜಿದಾರರಿಗೆ ಕೂಡಲೇ ಮನೆ ಹಂಚಿಕೆ ಮಾಡಬೇಕಿದೆ ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.








