ವಿಜಯಪುರ:ಜಗದ್ಗುರುಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಯಾರಿಗೂ ಅಧಿಕಾರವಿಲ್ಲ, ಭಕ್ತರೇ ಅವರಿಗೆ ನಿಜವಾದ ಆಸ್ತಿ ಮತ್ತು ಹಕ್ಕುಪತ್ರ. ಸ್ವಾಮೀಜಿಗಳನ್ನು ಹೊರಹಾಕಿದವರ ಅಹಂಕಾರ ನೋಡಿದ್ದೀರಾ ಎಂದು ಟ್ರಸ್ಟ್‌ನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಿದರೆ ರಾಜ್ಯದಲ್ಲಿ ನನ್ನ ನೇತೃತ್ವದಲ್ಲೇ ಹೊಸ ‘ಭಗವಾ ಝೇಂಡಾ’ ಸರ್ಕಾರ ರಚನೆಯಾಗಲಿದೆ ಎಂದು ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ.
ಮದಭಾಂವಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿಗಳ ಉಚ್ಚಾಟನೆ ವಿಚಾರವನ್ನು ತೀವ್ರವಾಗಿ ಖಂಡಿಸಿದರು. “ಯಾರಾದರೂ ಜಗದ್ಗುರುಗಳನ್ನು, ಪೂಜ್ಯರನ್ನು ಪೀಠದಿಂದ ತೆಗೆದುಹಾಕಲು ಸಾಧ್ಯವೇ? ಅವರಿಗೆ ಭಕ್ತರೇ ಆಸ್ತಿ, ಭಕ್ತರೇ ರಿಜಿಸ್ಟ್ರಾರ್, ಅವರೇ ಎಲ್ಲಾ ದಾಖಲೆ. ಇನ್ನು ಮುಂದೆ ಯಾರೂ ಗುರುಗಳನ್ನು ಉಚ್ಚಾಟನೆ ಮಾಡಿದ್ದಾರೆಂದು ಹೇಳಬೇಡಿ. ಆ ಪವರ್ ಅವರಿಗೆ ಇಲ್ಲ, ಆ ನಿಜವಾದ ಪವರ್ ಇರುವುದು ಭಕ್ತರಾದ ನಿಮಗೆ,” ಎಂದು ಜನರನ್ನುದ್ದೇಶಿಸಿ ಹೇಳಿದರು.
ಸ್ವಾಮೀಜಿಗಳ ಸರಳ ಜೀವನವನ್ನು ಕೊಂಡಾಡಿದ ಯತ್ನಾಳ್
ಪೀಠದ ಹಿಂದಿನ ಸ್ಥಿತಿಯನ್ನು ನೆನೆದ ಯತ್ನಾಳ್, “ಕೂಡಲಸಂಗಮ ಪೀಠದಲ್ಲಿ ಮೊದಲು ಏನೂ ಇರಲಿಲ್ಲ. ಅದೊಂದು ಸುಡುಗಾಡಿನಂತಿತ್ತು. ಅಲ್ಲಿದ್ದ ಫ್ಯಾನ್ ಹೇಗೆ ತಿರುಗುತ್ತಿತ್ತೋ ಗೊತ್ತಿಲ್ಲ. ಸ್ಪ್ರಿಂಗ್ ಹೋಗಿದ್ದ ಒಂದು ಸೋಫಾ ಇತ್ತು, ಅದರ ಮೇಲೆ ಕುಳಿತರೆ ಹಳ್ಳಕ್ಕೆ ಬಿದ್ದಂತೆ ಆಗುತ್ತಿತ್ತು. ಎಬ್ಬಿಸಲು ಇಬ್ಬರು ಬೇಕಿತ್ತು. ನಾನೇ ನೋಡಿ ಬೇರೆ ಸೋಫಾ ಕಳುಸಿಕೊಟ್ಟೆ. ಮಠದಲ್ಲಿ ಸರಿಯಾದ ಡೈನಿಂಗ್ ಟೇಬಲ್, ಮಂಚ, ಎಸಿ ಇರಲಿಲ್ಲ. ಸೊಳ್ಳೆ ಪರದೆಗೂ ತೂತು ಬಿದ್ದಿತ್ತು. ಅಂತಹ ಕಷ್ಟದ ಸ್ಥಿತಿಯಲ್ಲಿದ್ದ ಮಠವನ್ನು ಸ್ವಾಮೀಜಿಗಳು ಅಭಿವೃದ್ಧಿಪಡಿಸಿ, ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅಂಥವರನ್ನು ಇಂದು ಉಚ್ಚಾಟನೆ ಮಾಡಿದ್ದಾರೆ. ಹೀಗೆ ಮಾಡಿದವರ ಸೊಂಡಿ ನೋಡಿ ಹೇಗಿದೆ,” ಎಂದು ಹೆಸರು ಹೇಳದೆ ಟ್ರಸ್ಟ್‌ನವರ ವಿರುದ್ಧ ವ್ಯಂಗ್ಯವಾಡಿದರು.
ಸಂತರಾದವರಿಗೆ ಆಸ್ತಿಯ ವ್ಯಾಮೋಹ ಇರಬಾರದು ಎಂಬುದಕ್ಕೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆದರ್ಶವನ್ನು ಯತ್ನಾಳ್ ಸ್ಮರಿಸಿದರು. “ನಾವು ಸಿದ್ದೇಶ್ವರ ಶ್ರೀಗಳನ್ನು ನೋಡಿದ್ದೇವೆ. ಅವರ ಅಂಗಿಗೆ ಜೇಬು ಇರಲಿಲ್ಲ. ಬಟ್ಟೆ ಹರಿದರೆ ತಾವೇ ಹೊಲಿದುಕೊಳ್ಳುತ್ತಿದ್ದರು. ಚಪ್ಪಲಿ ಸವೆದರೂ ಅದನ್ನೇ ಹಾಕುತ್ತಿದ್ದರು. ಸ್ವಂತ ಕಾರು ಕೂಡ ಇಟ್ಟುಕೊಂಡಿರಲಿಲ್ಲ. ಅಂಥವರು ನಿಜವಾದ ಸಂತರು,” ಎಂದರು.
ನನ್ನದೇ ಹೊಸ ಪಕ್ಷ, ಯೋಗಿ ಮಾದರಿ ಆಡಳಿತ
ಸಮಾವೇಶದಲ್ಲಿ ಶಾಸಕ ಸಿದ್ದು ಸವದಿ ಅವರತ್ತ ತಿರುಗಿ ಮಾತನಾಡಿದ ಯತ್ನಾಳ್, “ಸಿದ್ದು ಅಣ್ಣ, ಒಂದು ವೇಳೆ ನನ್ನನ್ನು ಬಿಜೆಪಿಗೆ ತೆಗೆದುಕೊಳ್ಳದಿದ್ದರೆ, ನಾವು ನಮ್ಮದೇ ಆದ ‘ಭಗವಾ ಝೇಂಡಾ’ ಪಕ್ಷವನ್ನು ಸ್ಥಾಪಿಸುತ್ತೇವೆ. ರಾಜ್ಯದಲ್ಲಿ ನನ್ನ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವುದು ನಿಶ್ಚಿತ. ಆಗ ನೀವು ನಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಟಿವಿಯಲ್ಲಿ ನೋಡಬೇಕಾಗುತ್ತದೆ,” ಎಂದು ಹಾಸ್ಯದ ಮೂಲಕವೇ ಎಚ್ಚರಿಕೆ ರವಾನಿಸಿದರು.
“ನಾನು ಅಧಿಕಾರಕ್ಕೆ ಬಂದರೆ, ಪ್ರಮಾಣ ವಚನ ಸ್ವೀಕಾರದ ದಿನವೇ 11 ಜೆಸಿಬಿಗಳಿಗೆ ಪೂಜೆ ನಡೆಯಲಿದೆ. ದೇಶದ ವಿರುದ್ಧ ಮಾತನಾಡುವವರ ವಿರುದ್ಧ ಉತ್ತರ ಪ್ರದೇಶದ ಯೋಗಿ ಅಣ್ಣನ ಮಾದರಿಯಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಗೂ ಜೆಸಿಬಿ ಬೇಕು, ಕಾಲುವೆ ತೋಡಲೂ ಜೆಸಿಬಿ ಬೇಕು. ರಾಜ್ಯದಲ್ಲಿ ಜೆಸಿಬಿ ಘರ್ಜನೆ ಶುರುವಾಗಲಿದೆ,” ಎಂದು ಯೋಗಿ ಮಾದರಿ ಆಡಳಿತದ ಮುನ್ಸೂಚನೆ ನೀಡಿದರು.






