ಪೋಷಕರ ಆರೈಕೆಯನ್ನು ನಿರ್ಲಕ್ಷಿಸುವ ಮಕ್ಕಳಿಗೆ ಆಸ್ತಿ ವರ್ಗಾವಣೆ ಹಕ್ಕು ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಮಕ್ಕಳಿಂದ ನಿರ್ಲಕ್ಷಿತ ವೃದ್ಧ ಪೋಷಕರ ಹಕ್ಕುಗಳನ್ನು ಸಂರಕ್ಷಿಸಲು ಸರ್ಕಾರವು ಹೊಸ ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ.
ಸಚಿವ ಶರಣಪ್ರಕಾಶ್ ಪಾಟೀಲ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತಮ್ಮ ಹೆಸರಿಗೆ ಆಸ್ತಿ ಬರೆಯಿಸಿಕೊಂಡ ಬಳಿಕ ಮಕ್ಕಳು ಪೋಷಕರ ಆರೈಕೆ ಮಾಡದಿರುವ ದುರಂತ ಪರಿಸ್ಥಿತಿಗಳು ಹೆಚ್ಚಾಗುತ್ತಿವೆ. ಕೆಲವು ಮಕ್ಕಳು ವೃದ್ಧರನ್ನು ಆಸ್ಪತ್ರೆಗಳಲ್ಲಿ ಬಿಟ್ಟು ನಾಪತ್ತೆಯಾಗುತ್ತಿರುವ ದಾರುಣ ಘಟನೆಗಳು ವರದಿಯಾಗುತ್ತಿವೆ. ಇಂತಹ ಮಕ್ಕಳಿಗೆ ಆಸ್ತಿ ಹಕ್ಕು ಕಲ್ಪಿಸುವುದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ನಿರ್ಲಕ್ಷಿತ ಪೋಷಕರಿಗೆ ನ್ಯಾಯ
ಇಂತಹ ನಿರ್ಲಕ್ಷಿತ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಮಾಡಿರುವ ವಿಲ್ ಅಥವಾ ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಅದೇ ರೀತಿ, ಪೋಷಕರ ಆರೈಕೆ ಮಾಡದ ಮಕ್ಕಳಿಗೆ ಆಸ್ತಿ ಹಕ್ಕು ಇಲ್ಲದಂತೆ ಹೊಸ ಕಾನೂನು ಜಾರಿಗೆ ತರಲು ಸರ್ಕಾರ ಯೋಚನೆ ನಡೆಸುತ್ತಿದೆ.
ಹೊಸ ನಿಯಮದ ಅಗತ್ಯತೆ
ಪೋಷಕರಿಗೆ ತಾವು ಸಂಪಾದಿಸಿದ ಆಸ್ತಿಯ ಮೇಲೆ ಹಕ್ಕು ಇರಬೇಕು ಮತ್ತು ಮಕ್ಕಳ ನಿರ್ಲಕ್ಷ್ಯದ ಕಾರಣಕ್ಕೆ ಅವರು ಅನಾಥರಾಗುವಂತಿಲ್ಲ ಎಂಬುದನ್ನು ಖಚಿತಪಡಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ವೃದ್ಧ ಪೋಷಕರು ದೂರು ನೀಡಿದರೆ, ಆಸ್ತಿಯ ಹಕ್ಕು ವಾಪಸ್ ಪಡೆಯಲು ಸರ್ಕಾರ ಸಹಾಯ ಮಾಡಲಿದೆ ಎಂದು ಶರಣಪ್ರಕಾಶ್ ಪಾಟೀಲ ಹೇಳಿದರು.
ಈ ಹೊಸ ನಿಯಮ ಜಾರಿಗೆ ಬಂದರೆ, ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಆಸ್ತಿಯ ಮೇಲೆ ಯಾವುದೇ ಹಕ್ಕು ಇರಲ್ಲ. ಇದು ವೃದ್ಧ ಪೋಷಕರ ಭದ್ರತೆಯನ್ನು ಖಚಿತಪಡಿಸಲು ನೆರವಾಗಲಿದೆ.