ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮದವರೊಂದಿಗೆ ನಡೆಸಿದ ಸಂವಾದದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರ “ನಟ್-ಬೋಲ್ಟ್” ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ರಾಜಕೀಯಕ್ಕೆ ಪ್ರವೇಶಿಸಿದರೆ, ಯಾವ ನಟ್‌ಗಳನ್ನು ಟೈಟ್ ಮಾಡುತ್ತಾರೆ ಎಂಬ ಪ್ರಶ್ನೆಗೆ, “ಇದೆಲ್ಲಾ ಸಾಧು ಕೋಕಿಲ ಅವರ ಕಿತಾಪತಿ” ಎಂದು ಹಾಸ್ಯಭರಿತವಾಗಿ ಉತ್ತರಿಸಿದ್ದಾರೆ.
ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬಂದರೆ ಯಾವ ನಟ್‌ಗಳನ್ನು ಟೈಟ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ರಾಜಕೀಯಕ್ಕೆ ಹೋದವರೆಲ್ಲರೂ ಬದಲಾಗುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಾನು ರಾಜಕೀಯಕ್ಕೆ ಹೋದರೆ, ನಾನು ಬದಲಾಗದಂತೆ ನನ್ನನ್ನು ನಾನೇ ಟೈಟ್ ಮಾಡಿಕೊಳ್ಳುತ್ತೇನೆ ಎಂದರು. ಇದರೊಂದಿಗೆ, ಈ ವಿಚಾರದಲ್ಲಿ ನಟ ಮತ್ತು ನಿರ್ದೇಶಕ ಸಾಧು ಕೋಕಿಲ ಅವರದ್ದು ಕೈವಾಡವಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ.
ಇದೇ ವೇಳೆ, ಅವರು ತಮ್ಮ ತಾಯಿ ಬಗ್ಗೆಯೂ ಮಾತನಾಡಿದ್ದು, ಅವರ ಹೆಸರಿನಲ್ಲಿ ಪಾರ್ಕ್ ಒಂದನ್ನು ದತ್ತು ಪಡೆದು ಸಸಿಗಳನ್ನು ನೆಡುವ ಆಶಯ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸ್ಯಾಂಡಲ್‌ವುಡ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿದವರ ಬಗ್ಗೆಯೂ ಮಾತನಾಡಿದ ಸುದೀಪ್, ವೈಯಕ್ತಿಕವಾಗಿ ಆಹ್ವಾನಿಸಿದಾಗ ಮಾತ್ರ ಕೆಲವರು ಹೋಗಿದ್ದಾರೆ. ಆಹ್ವಾನಿಸದಿದ್ದರೆ ಹೋಗುವವರು ಯಾರು ಇಲ್ಲ ಎಂದು ಹೇಳಿದರು. ಆದರೆ ಕೆಲವರು ರಾಜಕೀಯಕ್ಕೆ ಬಂದಾಗ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿದ್ದಾರೆ, ಅದು ತಪ್ಪೇನಲ್ಲ, ಆದರೆ ಮೊದಲು ಆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.








