ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಛಾಪು ಮೂಡಿಸಿದ್ದ ವೆಸ್ಟ್ ಇಂಡೀಸ್ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದು, ಆ ಮೂಲಕ ಎರಡು ಬಾರಿ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕೆರೆಬಿಯನ್ನರು 48 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಕಪ್ನಿಂದ ಹೊರಗುಳಿದಿದೆ.
ಸ್ಕಾಟ್ಲೆಂಡ್ ವಿರುದ್ಧ ಶನಿವಾರ ನಡೆದ 2023ರ ಏಕದಿನ ವಿಶ್ವಕಪ್ನ ಕ್ವಾಲಿಫೈಯರ್ ಟೂರ್ನಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ 7 ವಿಕೆಟ್ಗಳ ಸೋಲನುಭವಿಸಿದ ವೆಸ್ಟ್ ಇಂಡೀಸ್, ಆ ಮೂಲಕ ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ವಿಶ್ವ ಕ್ರಿಕೆಟ್ನಲ್ಲಿ ಪ್ರಾಬಲ್ಯ ಮೆರೆದಿದ್ದ ಕೆರೆಬಿಯನ್ನರು 1975 ಹಾಗೂ 1979ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಗೆದ್ದು ಚಾಂಪಿಯನ್ ತಂಡವಾಗಿ ಮಿಂಚಿತ್ತು.
ಆದರೆ ನಂತರದ ವರ್ಷಗಳಲ್ಲಿ ಏಕದಿನ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಪ್ರಾಬಲ್ಯ ಕಡಿಮೆಯಾಗುತ್ತಾ ಬಂದಿತು. ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಸ್ವರ್ಣ ಯುಗವನ್ನ ಕಂಡಿದ್ದ ವಿಂಡೀಸ್, 1996ರಲ್ಲಿ ಸೆಮಿ ಫೈನಲ್, 2011 ಮತ್ತು 2015ರಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೇರಿತ್ತು. ಆದರೆ ನಂತರದ ವರ್ಷಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಅನುಭವಿಸಿದ ಕೆರೆಬಿಯನ್ನರು ಇದೀಗ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ.
ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಜೇಸನ್ ಹೋಲ್ಡರ್(45) ಹಾಗೂ ರೊಮಾರಿಯೋ ಶೆಫರ್ಡ್(36) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 43.5 ಓವರ್ಗಳಲ್ಲಿ 181 ರನ್ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಚೇಸ್ ಮಾಡಿದ ಸ್ಕಾಟ್ಲೆಂಡ್ ಮ್ಯಾಥ್ಯೂ ಕ್ರಾಸ್(74*) ಹಾಗೂ ಬ್ರೆಂಡನ್ ಮೆಕ್ಮುಲೆನ್(69) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 43.3 ಓವರ್ಗಳಲ್ಲಿ 185/3 ರನ್ಗಳಿಸುವ ಮೂಲಕ 7 ವಿಕೆಟ್ಗಳ ಗೆಲುವು ಸಾಧಿಸಿತು.








