ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ರಾಜ್ಯದ ಒಟ್ಟು 1400 ಜನೌಷಧಿ ಕೇಂದ್ರಗಳಲ್ಲಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ 180 ಕೇಂದ್ರಗಳ ಕಾರ್ಯಪದ್ಧತಿಯ ಬಗ್ಗೆ ಮಾತ್ರ ಸಮೀಕ್ಷೆ ಹಾಗೂ ಪುನರ್‌ವಿಚಾರ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಬೇಡ: ಸಚಿವರ ವಾದ
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಸರ್ಕಾರವೇ ಉಚಿತ ಔಷಧಿ ನೀಡುತ್ತಿರುವ ಸಂದರ್ಭದಲ್ಲಿ, ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ಔಷಧ ಮಾರಾಟ ಮಳಿಗೆಗಳ ಅಗತ್ಯವೇನಿದೆ? ಎಂಬ ಪ್ರಶ್ನೆ ಎತ್ತಿದರು. ಅವರು ತಿಳಿಸಿದಂತೆ, ಸಾರ್ವಜನಿಕರಿಗೆ ಸರ್ಕಾರ ಉಚಿತವಾಗಿ ಔಷಧಿಗಳನ್ನು ನೀಡುತ್ತಿರುವಾಗ, ವೈದ್ಯರ ಚೀಟಿಗೆ ಹೊರಗಿನಿಂದ ಔಷಧಿ ತರಿಸುವ ಪದ್ಧತಿ ಅಂತ್ಯವಾಗಬೇಕು.
180 ಜನೌಷಧಿ ಕೇಂದ್ರಗಳ ಬಗ್ಗೆ ಮಾತ್ರ ಚಿಂತನೆ: ರಾಜಕೀಯ ಬೆರೆಸಬೇಡಿ
ಜನೌಷಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ ಇದರ ಬಗ್ಗೆ ಯಾವುದೇ ರಾಜಕೀಯ ಮಾಡುವ ಉದ್ದೇಶವಿಲ್ಲ ಎಂದು ಅವರು ಖಚಿತಪಡಿಸಿದರು. ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜಕೀಯ ಬೆರಸುತ್ತಿದ್ದಾರೆ. ಕೇವಲ 180 ಕೇಂದ್ರಗಳ ವಿಚಾರವಷ್ಟೇ ಪ್ರಸ್ತುತ; ಇನ್ನು 1220 ಜನೌಷಧಿ ಕೇಂದ್ರಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ, ಎಂದರು.
ಹೊಸದಾಗ ಬಂದಿದ್ದ 31 ಜನೌಷಧಿ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಇದರ ಹಿಂದಿನ ಕಾರಣವೆಂದರೆ, ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ಮತ್ತಷ್ಟು ಔಷಧಿ ಮಳಿಗೆಗಳನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂಬ ಸರ್ಕಾರದ ನಿಲುವು. ಈಗಿರುವ ಕೇಂದ್ರಗಳಲ್ಲಿಯೂ ಕೆಲವು ನವೀಕರಣದ ಹಂತದಲ್ಲಿವೆ, ಮತ್ತೆ ಕೆಲವು ಇತ್ತೀಚೆಗೆ ಆರಂಭವಾಗಿದ್ದು, ಅದರ ಮೇಲೆ ತಕ್ಷಣವೇ ನಿರ್ಬಂಧ ಹೇರುವುದಿಲ್ಲ.
ಬ್ರಾಂಡೆಡ್ ಔಷಧಿಗಳ ಮಾರಾಟ? ಪರಿಶೀಲನೆ ನಡೆಯುತ್ತಿದೆ
ಜನೌಷಧಿ ಕೇಂದ್ರಗಳಲ್ಲಿ ಜನರಿಕ್ ಔಷಧಿಗಳನ್ನೇ ಮಾರಾಟ ಮಾಡಬೇಕು ಎಂಬ ನಿಯಮವಿದ್ದರೂ, ಕೆಲವು ಕೇಂದ್ರಗಳಲ್ಲಿ ಬ್ರಾಂಡೆಡ್ ಔಷಧಿಗಳು ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಔಷಧ ನಿಯಂತ್ರಣ ಮಂಡಳಿ ತನಿಖೆ ನಡೆಸುತ್ತಿದ್ದು, ನಿಯಮ ಉಲ್ಲಂಘನೆಯಿರುವ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆಯಿಲ್ಲ. ಕೆಲವೊಮ್ಮೆ ಕಡಿಮೆ ಬೇಡಿಕೆ ಇರುವ ಔಷಧಗಳು ಲಭ್ಯವಿಲ್ಲದಿದ್ದರೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು BPPI ಮೂಲಕ ಖರೀದಿ ಮಾಡಬಹುದಾಗಿದೆ. ಅವುಗಳಿಗಾಗಿ ಹಣಕಾಸು ಸಹಿತ ಸೌಲಭ್ಯಗಳನ್ನು ಆಸ್ಪತ್ರೆಗಳಲ್ಲಿಯೇ ಕಲ್ಪಿಸಲಾಗಿದೆ, ಎಂದು ದಿನೇಶ್ ಗುಂಡೂರಾವ್ ಹೇಳಿದರು.








