ಚೆನ್ನೈ: ಇಂಡಿಯಾ ಬಣದ ಪಕ್ಷಗಳು ಈಗಾಗಲೇ ಸೋಲು ಒಪ್ಪಿಕೊಂಡು ಹೊರಗೆ ಹೋಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ತಮಿಳುನಾಡಿನ ತಿರುಪ್ಪೂರ್ ನಲ್ಲಿ ಬಿಜೆಪಿಯ ‘ಎನ್ ಮಣ್ಣ್ ಎನ್ ಮಕ್ಕಳ್’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಂಡಿಯಾ ಬಣದ ಘಟಕಗಳು ಸೋಲು ಕಂಡು, ಈಗ ತಮಿಳುನಾಡು ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕಳೆದ ವರ್ಷ ಜುಲೈ 28ರಂದು ರಾಮೇಶ್ವರಂನಿಂದ ಪಾದಯಾತ್ರೆ ಆರಂಭಿಸಿದ್ದರು. ಈ ಯಾತ್ರೆಗೆ ಅಮಿತ್ ಶಾ ಚಾಲನೆ ನೀಡಿದ್ದರು. ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಜಿಲ್ಲಾ ಸಂಘದ ಪದಾಧಿಕಾರಿಗಳು, ಪಕ್ಷದ ಸದಸ್ಯರು ಮತ್ತು ಸಾರ್ವಜನಿರು ಭಾಗವಹಿಸಿದ್ದರು.
ತಮಿಳುನಾಡು ಯಾವಾಗಲೂ ಬಿಜೆಪಿಯ ಹೃದಯದಲ್ಲಿದೆ. ರಾಜ್ಯದಲ್ಲಿ ಪಕ್ಷವು ಎಂದಿಗೂ ಅಧಿಕಾರದಲ್ಲಿಲ್ಲ. ದಕ್ಷಿಣ ರಾಜ್ಯದಲ್ಲಿ ಬಿಜೆಪಿಯ ಶಕ್ತಿ ಹೆಚ್ಚುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ ಬಿಜೆಪಿಯ ಹೃದಯದಲ್ಲಿ ಸದಾ ನೆಲೆಸಿದೆ. ಈ ರಾಜ್ಯವನ್ನು ದಶಕಗಳಿಂದ ಲೂಟಿ ಮಾಡಿದವರಿಗೆ ಬಿಜೆಪಿಯ ಹೆಚ್ಚುತ್ತಿರುವ ಒಲವಿನ ಬಗ್ಗೆ ಭಯವಿದೆ ಎಂದು ಗುಡುಗಿದ್ದಾರೆ.