ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಸಂಭವಿಸಿದ ಭಯಾನಕ ಭಯೋತ್ಪಾದಕ ದಾಳಿ ದೇಶವನ್ನು ತತ್ತರಿಸಿದೆ. ಈ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಮೂಲದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಸೇರಿ ಹಲವಾರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಿಗರೊಡನೆ ಹೋಗಿದ್ದ ಮಂಜುನಾಥ್ ರಾವ್ ಅವರು ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾಗಿದ್ದು, ಈ ಘಟನೆಯು ದಕ್ಷಿಣ ಭಾರತದ ಅನೇಕರ ಮನದಲ್ಲಿ ಭಯವನ್ನು ಬಿತ್ತಿದೆ.
ಘಟನೆಯು ತೀವ್ರ ತೀವ್ರತೆಯಿಂದ ನಡೆದಿದ್ದು,25ಕ್ಕೂ ಹೆಚ್ಚು ಸಾವು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ವರದಿಯಿದೆ. ಗಾಯಗೊಂಡವರಲ್ಲಿ ಪ್ರವಾಸಿಗರು ಮಾತ್ರವಲ್ಲದೆ, ಕೆಲವರು ಸ್ಥಳೀಯ ನಾಗರಿಕರೂ ಇದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗಬಹುದೆಂಬ ಶಂಕೆ ಉಂಟಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಪಹಲ್ಗಾಮ್‌ನ ಈ ಪೈಶಾಚಿಕ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಸದ್ಯ ಸೌದಿ ಅರೇಬಿಯಾದ ಪ್ರವಾಸದಲ್ಲಿರುವ ಮೋದಿ ಅವರು ಅಲ್ಲಿಂದಲೇ ಗೃಹ ಸಚಿವ ಅಮಿತ್ ಶಾ ಅವರಿಗೆ ತುರ್ತು ಸೂಚನೆ ನೀಡಿ, ಕೂಡಲೇ ಪಹಲ್ಗಾಮ್‌ಗೆ ತೆರಳಿ ಪರಿಸ್ಥಿತಿಯನ್ನು ವೀಕ್ಷಿಸುವಂತೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಎಕ್ಸ್’ನಲ್ಲಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ.ಇದಕ್ಕೆ ಕಾರಣರಾದ ಯಾರನ್ನೂ ಕೂಡ ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಬಾಧಿತರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಒದಗಿಸಲಾಗುತ್ತಿದೆ. ಈ ಹೇಯ ಕೃತ್ಯ ನಡೆಸಿದವರನ್ನು ನ್ಯಾಯದ ಕಟಕಟೆಗೆ ತರಲಾಗುವುದು. ಅವರ ದುಷ್ಟ ಯೋಜನೆ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ದಾಳಿಯ ಹಿನ್ನೆಲೆಯ ಬಗ್ಗೆ ತನಿಖೆ ಮುಂದುವರಿದಿದ್ದು, ಖಚಿತ ಮಾಹಿತಿಗಾಗಿ ಎನ್‌ಐಎ ತಂಡವೂ ಸ್ಥಳಕ್ಕೆ ತೆರಳಲಿದೆ ಎಂದು ವರದಿಯಾಗಿದೆ. ತೀವ್ರ ನಿಗಾವಹಿಸಿಕೊಂಡಿರುವ ಸೇನೆ ಹಾಗೂ ಪೊಲೀಸ್ ಪಡೆಗಳು ಈಗಾಗಲೇ ಪ್ರದೇಶದಲ್ಲಿ ತೀವ್ರ ಗಸ್ತು ಹಾಕುತ್ತಿವೆ.
ಈ ದಾಳಿ ಪ್ರವಾಸೋದ್ಯಮದ ಮೇಲೆ ತೀವ್ರ ಹೊಡೆತ ನೀಡಿದ್ದು, ಬೇಸಿಗೆ ಕಾಲದಲ್ಲಿ ಕಾಶ್ಮೀರಕ್ಕೆ ತೆರಳಿದ್ದ ಅನೇಕರು ಈಗ ಆತಂಕದಲ್ಲಿದ್ದಾರೆ. ದೇಶದ ಶಾಂತಿ ಮತ್ತು ಸಾಮರಸ್ಯಕ್ಕೆ ಕಂಟಕ ಉಂಟುಮಾಡುವ ಇಂತಹ ಕ್ರೂರ ಕ್ರಿಯೆಗಳು ಎಂದಿಗೂ ಸಹನೀಯವಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ.








