ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಅಲ್ಪಾವಧಿಯಲ್ಲಿಯೇ ಮೂರು ಸ್ವರೂಪಗಳಲ್ಲಿಯೂ ಪಾಕಿಸ್ತಾನ ತಂಡದ ಖಾಯಂ ಸದಸ್ಯರಾಗಿದ್ದಾರೆ.
140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ನಸೀಮ್, ಸಂದರ್ಶನವೊಂದರಲ್ಲಿ ಮಾತನಾಡಿ ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದೇ ನನ್ನ ಅತೀ ದೊಡ್ಡ ಕನಸು ಎಂದು ಹೇಳಿದ್ದಾರೆ.
ಭಾರತದ ವಿರುದ್ಧ ಆಡುವಾಗ ನಾನು ಪ್ರಾಣವನ್ನೇ ಪಣಕ್ಕಿಟ್ಟು ಆಡುತ್ತೇನೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವುದೇ ನಮ್ಮೆಲ್ಲರ ಗುರಿಯಾಗಿರುತ್ತದೆ. ಅದರಲ್ಲೂ ಅವರನ್ನು ಶೂನ್ಯಕ್ಕೆ ಔಟ್ ಮಾಡಬೇಕೆಂಬುದು ನನ್ನ ಬಹು ದೊಡ್ಡ ಕನಸು. ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡುವುದು ಹೆಮ್ಮೆಯ ವಿಷಯವಾಗಿರುತ್ತದೆ. ಹೀಗಾಗಿ ಕಿಂಗ್ ಕೊಹ್ಲಿಯನ್ನು ಮುಂದಿನ ದಿನಗಳಲ್ಲಿ ಡಕ್ ಔಟ್ ಮಾಡಬೇಕೆಂದಿರುವೆ ಎಂದು ನಸೀಮ್ ಶಾ ಹೇಳಿದ್ದಾರೆ.
ಮುಂಬರುವ ಏಷ್ಯಾಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇದಲ್ಲದೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲೂ ಸಾಂಪ್ರದಾಯಿಕ ಎದುರಾಳಿಗಳು ಸೆಣಸಲಿವೆ. ಆಗ ಕೊಹ್ಲಿ ವಿಕೆಟ್ ಪಡೆಯುತ್ತಾರೆಯೇ ಕಾಯ್ದು ನೋಡಬೇಕಿದೆ.