ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚುನಾವಣೆ ತಯಾರಿ ನಡೆದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಲಾಗುತ್ತಿದೆ. ಈ ವೇಳೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸಲ್ಲಿಸಿದ್ದ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಪಾಕಿಸ್ತಾನದಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಸಂಸ್ಥಾಪಕ ಇಮ್ರಾನ್ ಖಾನ್ (Imran Khan) ನಾಮಪತ್ರ ಸಲ್ಲಿಸಿದ್ದರು. ಈ ನಾಮಪತ್ರಗಳನ್ನು ಆಯೋಗ ತಿರಸ್ಕರಿಸಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ತಮ್ಮ ತವರು ಕ್ಷೇತ್ರ ಮಿಯಾನ್ವಾಲಿಯಿಂದ ನಾಮಪತ್ರ ಸಲ್ಲಿಸಿದ್ದರು.
ಇಮ್ರಾನ್ ಖಾನ್ ಅವರು 2022 ರಲ್ಲಿ ಸಂಸತ್ತಿನ ಅವಿಶ್ವಾಸ ಮತದಲ್ಲಿ ಪದಚ್ಯುತಗೊಂಡ ನಂತರದಿಂದ ಇಲ್ಲಿಯವರೆಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಸದ್ಯ ಖಾನ್ ಅವರನ್ನು ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಇದನ್ನು ರದ್ದುಕೊಳಿಸುವಂತೆ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದಾರೆ.