ಪಾರ್ಕಿಂಗ್ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಪತ್ನಿ ಹಾಗೂ ಮಗನ ಎದುರೇ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಘಟನೆಯಲ್ಲಿ ಕೊಲೆಯಾದ ವ್ಯಕ್ತಿಯ ಪತ್ನಿಗೂ ಗಾಯಗಳಾಗಿವೆ. ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಿವಾಸಿಯೇ ಸಾವನ್ನಪ್ಪಿರುವ ವ್ಯಕ್ತಿ. ಅರವಿಂದ್ ಮಂಡಲ್ ಕೊಲೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಅರವಿಂದ್ ಮಂಡಲ್ ಸಂಜೆ ತನ್ನ ಮಗ ಆಕಾಶ್‌ನೊಂದಿಗೆ ಶಾಲೆಯಿಂದ ಹಿಂತಿರುಗಿದ್ದಾಗ ಮನೋಜ್ ಹಲ್ದರ್ ಎಂಬ ವ್ಯಕ್ತಿ ಜಗಳವಾಡಿದ್ದಾರೆ.
ದ್ವಿ ಚಕ್ರ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಹಲವು ದಿನಗಳಿಂದ ಜಗಳವಿತ್ತು ಎನ್ನಲಾಗಿದೆ. ನಿನ್ನೆ ಮತ್ತೆ ಜಗಳ ಶುರುವಾಗಿ, ಸ್ಥಳೀಯರು ಜಗಳ ಬಿಡಿಸಿದ್ದರು. ಆಗ ಅರವಿಂದ್ ಮನೆಗೆ ತೆರಳಿದ್ದರು. ಆದರೆ, ರಾತ್ರಿ ವೇಳೆ 6 ಜನ ಅರವಿಂದ್ ಮನೆಗೆ ತೆರಳಿ ಚಾಕು ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಬಲೆ ಬೀಸಲಾಗಿದೆ.