ಪಂಚಾಯತ್ ಚುನಾವಣೆಯಲ್ಲಿ ಶೇ. 70ರಷ್ಟು ಕ್ಷೇತ್ರಗಳನ್ನು ಬಿಜೆಪಿ ಅವಿರೋಧವಾಗಿ ಗೆದ್ದು ಬೀಗಿದೆ.
ತ್ರಿಪುರಾದಲ್ಲಿ ಆಡಳಿತ ಪಕ್ಷ ಬಿಜೆಪಿ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನವೇ ಭರ್ಜರಿ ಗೆಲುವು ಸಾಧಿಸಿದೆ. ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿ ಹಾಗೂ ಜಿಲ್ಲಾ ಕೌನ್ಸಿಲ್ ಸೇರಿದಂತೆ ಒಟ್ಟು 6,889 ಸ್ಥಾನಗಳ ಪೈಕಿ ಈಗಾಗಲೇ ಬಿಜೆಪಿ 4,805 ಸ್ಥಾನಗಳಲ್ಲಿ ಗೆಲುವು ಕಂಡಿದೆ.
ಅಂದರೆ, ತ್ರಿಪುರಾದಲ್ಲಿ ಶೇ. 71ರಷ್ಟು ಕ್ಷೇತ್ರಗಳಿಗೆ ಮತದಾನವೇ ನಡೆಯುತ್ತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅಸಿತ್ ಕುಮಾರ್ ದಾಸ್ ಹೇಳಿದ್ದಾರೆ.
ಮತದಾನ ನಡೆಯಲಿರುವ 1,819 ಗ್ರಾಮ ಪಂಚಾಯಿತಿ ಸ್ಥಾನಗಳ ಪೈಕಿ ಬಿಜೆಪಿ 1,809 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಿಪಿಐ(ಎಂ) 1,222 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 731 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭಾರತೀಯ ಜನತಾ ಪಕ್ಷದ ಮಿತ್ರ ಪಕ್ಷ ತಿಪ್ರಾ ಮೋಥಾ 138 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅಸಿತ್ ಕುಮಾರ್ ದಾಸ್ ತಿಳಿಸಿದ್ದಾರೆ.
ಪಂಚಾಯತಿ ಸಮಿತಿಗಳಲ್ಲಿ ಒಟ್ಟು 423 ಸ್ಥಾನಗಳಲ್ಲಿ ಬಿಜೆಪಿ 235 ಅಥವಾ ಶೇ. 55ರಷ್ಟು ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಈಗ 188 ಸ್ಥಾನಗಳಿಗೆ ಮತದಾನ ನಡೆಯಬೇಕಿದೆ. 116 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ 20ರಲ್ಲಿ ಬಿಜೆಪಿ ಅವಿರೋಧವಾಗಿ ಗೆದ್ದಿದೆ. ಬಿಜೆಪಿ ಎಲ್ಲಾ 188 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಿಪಿಐ(ಎಂ) 148 ಮತ್ತು ಕಾಂಗ್ರೆಸ್ 98 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
116 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಬಿಜೆಪಿ ಅವಿರೋಧವಾಗಿ ಶೇ. 17ರಷ್ಟು ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅವಿರೋಧವಾಗಿ ಶೇ. 96 ಸ್ಥಾನಗಳನ್ನು ಗೆದ್ದಿತ್ತು. ತ್ರಿಪುರಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 8 ರಂದು ಮತದಾನ ನಡೆಯಲಿದೆ.








