ರಿಯೊ ಡಿ ಜನೈರೊ : ವಿಮಾನ ಪತನಗೊಂಡ (Plane Crash) ಪರಿಣಾಮ 14 ಜನ ಸಾವನ್ನಪ್ಪಿರುವ ಘಟನೆ ಬ್ರೆಜಿಲ್ನ (Brazil) ಜನಪ್ರಿಯ ಪ್ರವಾಸಿ ತಾಣವಾದ ಬಾರ್ಸಿಲೋಸ್ನಲ್ಲಿ ನಡೆದಿದೆ.
ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸಿದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 12 ಜನ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭಾರೀ ಮಳೆ ಹಾಗೂ ಬಿರುಗಾಳಿಯ ನಡುವೆ ಪೈಲೆಟ್ ವಿಮಾನವನ್ನು ಇಳಿಸಲು ಯತ್ನಿಸಿದ್ದಾರೆ. ಇದರಿಂದಾಗಿ ಎದುರಿನ ರನ್ ವೇ ಪೈಲೆಟ್ಗೆ ಕಾಣಿಸದೆ ಮಧ್ಯದಲ್ಲಿ ವಿಮಾನ ಇಳಿದಿದೆ. ಈ ಸಂದರ್ಭದಲ್ಲಿ ನಿಯಂತ್ರಣಕ್ಕೆ ಬರದೆ ವಿಮಾನ ಪತನವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
ಸಾವನ್ನಪ್ಪಿದವರು ಬ್ರೆಜಿಲ್ನ ಪ್ರಜೆಗಳು ಎಂದು ತಿಳಿದು ಬಂದಿದೆ. ಅವಘಡದ ಬಗ್ಗೆ ಬ್ರೆಜಿಲ್ ವಾಯುಪಡೆ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಾರ್ಸಿಲೋಸ್ಗೆ ಆಗಮಿಸುತ್ತಿದ್ದ ಎರಡು ವಿಮಾನಗಳನ್ನು ಹವಾಮಾನದ ಕಾರಣದಿಂದಾಗಿ ಮನೌಸ್ಗೆ ವಾಪಸ್ ಕಳುಹಿಸಲಾಗಿದೆ. ಹೆಚ್ಚಿನ ಮಳೆಯ ಹಿನ್ನೆಲೆಯಲ್ಲಿ ವಿಮಾನ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಅನುಮತಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಲ್ಲಿನ ವಾಯು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ