ಜೂನ್ 12ರಂದು ಸಂಭವಿಸಿದ ಅಹಮದಾಬಾದ್ ವಿಮಾನ ದುರಂತದ ಸಾವು-ನೋವಿಗೆ ದೇಶವಿಡಿ ಶೋಕ ಆವರಿಸಿದೆ. 241 ಪ್ರಯಾಣಿಕರು ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 265 ಮಂದಿ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಪತನಗೊಂಡ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾದ ಕಾರಣ, ಮೃತದೇಹಗಳನ್ನು ಗುರುತಿಸುವುದು ಬಹಳ ಸವಾಲಿನ ಕೆಲಸವಾಗಿದೆ.
ಶವಗಳ ಸ್ಥಿತಿ ಭೀಕರ:
ವಿಮಾನದಲ್ಲಿ ಉಂಟಾದ ಭಾರಿ ಬೆಂಕಿ ಹಾಗೂ ಸ್ಪೋಟದ ಪರಿಣಾಮವಾಗಿ ಶವಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಗುರುತಿಸುವ ಸ್ಥಿತಿಯಲ್ಲಿಲ್ಲ. ಈ ಕಾರಣದಿಂದಾಗಿ ಅಧಿಕಾರಿಗಳು ಎಲ್ಲ ಮೃತದೇಹಗಳನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ಅಲ್ಲಿಯೇ ಶವಪರೀಕ್ಷೆ ಹಾಗೂ DNA ಟೆಸ್ಟ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
DNA ಟೆಸ್ಟ್ ಮೂಲಕ ಗುರುತು:
ಶವಗಳ DNA ಮಾದರಿಗಳನ್ನು ಸಂಗ್ರಹಿಸಿ ತಕ್ಷಣವೇ ವಿಶ್ಲೇಷಣೆಗೆ ನೀಡಲಾಗಿದೆ. ಈ ಟೆಸ್ಟ್‌ನ ಪ್ರಾಥಮಿಕ ಹಂತದಲ್ಲಿ ಈಗಾಗಲೇ 110 ಜನರ ಗುರುತು ಪತ್ತೆಯಾಗಿದೆ. ಉಳಿದವರ ಗುರುತು ಪತ್ತೆ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈವರೆಗೆ ಗುರುತಿಸಲ್ಪಟ್ಟ 110 ಮೃತದೇಹಗಳ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಉಳಿದ ಶವಗಳ ಗುರುತು ಪತ್ತೆ ಮಾಡುವ ಪ್ರಕ್ರಿಯೆ ಮುಂದುವರೆದಿದ್ದು, ಅಧಿಕಾರಿಗಳು ಹೆಚ್ಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.