ಪ್ರಧಾನಿ ಮೋದಿ ಜೊತೆ ತಮ್ಮ ಅನುಭವ ಹಂಚಿಕೊಂಡ ಥಾಮಸ್ ಕಪ್ ಹೀರೋಸ್
ಥಾಮಸ್ ಕಪ್ ಮತ್ತು ಉಬರ್ ಕಪ್ ನಲ್ಲಿ ದೇಶದ ಪರ ಆಡಿ ಅದ್ಭುತ ಸಾಧನೆ ಮಾಡಿದ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಈ ವೇಳೆ ಎಲ್ಲ ಆಟಗಾರರು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಪ್ರಧಾನಿ ಮೋದಿ ಆಟಗಾರರನ್ನ ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.
ಇತ್ತೀಚೆಗೆ ಭಾರತ ತಂಡ ಥಾಮಸ್ ಕಪ್ ಗೆದ್ದಿತ್ತು. ಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸಿದ ನಂತರ ಭಾರತ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಟೂರ್ನಿಯಲ್ಲಿ ಭಾರತ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು.
ಕಿಡಂಬಿ ಶ್ರೀಕಾಂತ್, ಚಿರಾಗ್-ಸಾತ್ವಿಕ್ ಜೋಡಿ ಮತ್ತು ಲಕ್ಷ್ಯ ಸೇನ್ ಭಾರತಕ್ಕೆ ಥಾಮಸ್ ಕಪ್ ಗೆಲ್ಲುವಲ್ಲಿ ಹೆಚ್ಚಿನ ಕೊಡುಗೆ ನೀಡಿದರು. ಇದಲ್ಲದೇ ಎಚ್.ಎಸ್.ಪ್ರಣೋಯ್ ಕಷ್ಟಕಾಲದಲ್ಲಿ ಗಾಯಗೊಂಡರೂ ಗೆದ್ದು ದೇಶವನ್ನು ಚಾಂಪಿಯನ್ ಮಾಡಿದ್ದರು. ಉಬರ್ ಕಪ್‌ನಲ್ಲಿ ಆತಿಥೇಯ ಥಾಯ್ಲೆಂಡ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಭಾರತ ತಂಡ ಹೊರಬಿದ್ದಿತ್ತು.
ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಪ್ರಧಾನಿ ಮೋದಿ ಈ ಹಿಂದೆ ದೂರವಾಣಿಯಲ್ಲಿ ಮಾತನಾಡಿದ್ದರು. ನೀವು ಅದ್ಭುತ ಸಾಧನೆಗಳನ್ನ ಮಾಡಿದ್ದೀರಿ, ನಿಮ್ಮ ಗೆಲುವು ಬಹಳಷ್ಟು ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ. ಎಂದು ಮೋದಿ ಹೇಳಿದ್ದರು. ಇದಾದ ನಂತರ ಆಟಗಾರರು ತುಂಬಾ ಖುಷಿಯಿಂದ ಕಾಣುತ್ತಿದ್ದರು.