ಕೊಟ್ಟಾಯಂ : ಪೊಲೀಸ್ ಅಧಿಕಾರಿಯೊಬ್ಬ ಮಾವಿನ ಹಣ್ಣು ಕದ್ದು ಸಸ್ಪೆಂಡ್ ಆಗಿರುವ ಘಟನೆ ಕೇರಳದ ಕಂಜಿರಪಲ್ಲಿಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ. ಕಳ್ಳತನ ಮಾಡಿದ್ದು ಸಾಬೀತಾಗುತ್ತಿದ್ದಂತೆ ಡುಕ್ಕಿ ಜಿಲ್ಲೆಯ ಮುಖ್ಯ ಪೊಲೀಸ್ ಅಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿಹಾಬ್, ಕಳೆದ ವರ್ಷ ಸೆ.30ರಂದು ಕಂಜಿರಪಲ್ಲಿಯ ಹಣ್ಣಿನ ಅಂಗಡಿಗೆ ತೆರಳಿ, ಮಾವಿನ ಹಣ್ಣುಗಳನ್ನು ಕಳವು ಮಾಡಿದ್ದರು. ಕೆಜಿಗೆ 600 ರೂ.ಮೌಲ್ಯದ ಸುಮಾರು 10 ಕೆಜಿ ಮಾವಿನ ಹಣ್ಣನ್ನು ಕಳ್ಳತನ ಮಾಡಿದ್ದರು. ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಅಕ್ಟೋಬರ್ 3 ರಂದು ಕೇರಳ ಡಿಜಿಪಿ, ಆರೋಪಿ ಶಿಹಾಬ್ನನ್ನು ಅಮಾನತುಗೊಳಿಸಿದ್ದರು.
ಶಿಹಾಬ್ ಅಪರಾಧ ಹಿನ್ನೆಲೆಯನ್ನು ಸಹ ಹೊಂದಿದ್ದಾರೆ. 2019ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಜೈಲಿನಿಂದ ಹೊರಬಂದ ನಂತರ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ಮುಂಡಕ್ಕಯಂ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪೊಲೀಸ್ ಕೆಲಸಕ್ಕೆ ಸೇರುವುದಕ್ಕೂ ಮುನ್ನ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆಯೂ ಶಿಹಾಬ್ ವಿರುದ್ಧ ಕೇಸು ದಾಖಲಾಗಿತ್ತು. ಗಣಿಗಾರಿಕೆ ಮಾಫಿಯಾಗಳ ಸಂಪರ್ಕ, ಶಬರಿಮಲೆಯಲ್ಲಿ ವಿಐಪಿ ದರ್ಶನ ಆಮಿಷವೊಡ್ಡಿ ಭಕ್ತರಿಂದ ಹಣ ವಸೂಲಿ, ಕರ್ತವ್ಯವಿಲ್ಲದ ವೇಳೆ ಸಮವಸ್ತ್ರ ಧರಿಸಿ ಸ್ಥಳೀಯರಿಂದ ಹಣ ವಸೂಲಿ ಸೇರಿದಂತೆ ಹಲವರು ಆರೋಪಗಳು ಕೂಡ ಈ ಅಧಿಕಾರಿ ಮೇಲೆ ಇವೆ ಎನ್ನಲಾಗಿದೆ.