ಜನರಿಗೆ ಪೊಲೀಸರ ಮೇಲಿನ ನಕಾರಾತ್ಮಕ ಭಾವನೆ ಬದಲಾಯಿಸಿ : ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಪೊಲೀಸರ ಮೇಲಿನ ನಕಾರಾತ್ಮಕ ಭಾವನೆ ಬದಲಾಯಿಸಿ ಎಂದು ಐಪಿಎಸ್ ಪ್ರೊಬೇಷನ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.. ದೇಶ ಮೊದಲು, ಸದಾ ಮೊದಲು ಎನ್ನುವುದು ಪ್ರತಿಯೊಂದು ಕಾರ್ಯಗಳಲ್ಲೂ ಪ್ರತಿಬಿಂಬಿಸಬೇಕು. ಪೊಲೀಸ್ ಪಡೆಯ ಬಗ್ಗೆ ಜನರಿಗಿರುವ ನಕಾರಾತ್ಮಕ ಭಾವನೆ ಬದಲಿಸಲು ಶ್ರಮಿಸಬೇಕು ಎಂದು ಮೋದಿ ಐಪಿಎಸ್ ಪ್ರೊಬೇಷನ್ ಅಧಿಕಾರಿಗಳಿಗೆ ಸಲಹೆ ನೀಡಿದ್ಧಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪ್ರೊಬೇಷನ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ನಮೋ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರ ಮತ್ತು ಕೆಲಸಗಳನ್ನು ಕೈಗೊಳ್ಳಿ ಎಂದಿದ್ದಾರೆ. ಅಲ್ಲದೇ ಜನರಲ್ಲಿ ಪೊಲೀಸರ ಬಗೆಗಿರುವ ನಕಾರಾತ್ಮಕ ಗ್ರಹಿಕೆಯನ್ನು ಬದಲಾಯಿಸುವುದು ದೊಡ್ಡ ಸವಾಲು.
ಆದರೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಪೊಲೀಸ್ ಸಿಬ್ಬಂದಿ ಸಹಾಯ ಮಾಡುತ್ತಿರುವುದನ್ನು ಜನರು ಗಮನಿಸಿದ್ದಾರೆ. ಆಗ ಪೊಲೀಸರ ಬಗೆಗಿನ ಜನರ ಭಾವನೆ ಸ್ವಲ್ಪ ಮಟ್ಟಿಗೆ ಬದಲಾಗಿತ್ತು. ಆದರೆ ಈಗ ಮತ್ತೆ ಜನರಲ್ಲಿ ನಕಾರಾತ್ಮಕ ಗ್ರಹಿಕೆ ಮನೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ದೇಶದ ಭದ್ರತೆ ಮತ್ತು ಉಗ್ರರ ವಿರುದ್ಧದ ಹೋರಾಟದ ವೇಳೆ ನಮ್ಮ ಪೊಲೀಸ್ ಅಧಿಕಾರಿಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರು ಕೂಡ ಜನರಿಗಾಗಿ ಹಲವು ದಿನಗಳ ಕಾಲ ಮನೆಗೆ ಹೋಗದೆ ಕಾರ್ಯನಿರ್ವಹಿಸಿದ್ದಾರೆ.ಆದರೂ ಜನರಲ್ಲಿ ಅವರ ಬಗೆಗಿರುವ ಮನೋಭಾವನೆಯೇ ಬೇರೆ. ಹಾಗಾಗಿ ಪೊಲೀಸ್ ಪಡೆಗೆ ಸೇರ್ಪಡೆಯಾಗುವ ಹೊಸ ಪೀಳಿಗೆಯು ಜನರ ಈ ಗ್ರಹಿಕೆಯನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.