ರಾಯಚೂರು: ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಲು ಕತ್ತರಿಸಿ ಭೀಕರ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ದೇವದುರ್ಗ(Devadurga) ತಾಲ್ಲೂಕಿನ ನಿಲವಂಜಿ ಹತ್ತಿರ ಈ ಘಟನೆ ನಡೆದಿದೆ. ಗ್ರಾಮದ ಮಾರ್ಕಂಡಯ್ಯ ಅಲಿಯಾಸ್ ಕಂಡೆಪ್ಪ ಭೀಕರವಾಗಿ ಹತ್ಯೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಬೈಕ್ ನಲ್ಲಿ ಮಾರ್ಕಂಡಯ್ಯ ತನ್ನ ಸಂಬಂಧಿ ಆದಪ್ಪ ಎಂಬುವವರೊಂದಿಗೆ ದೇವದುರ್ಗಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಹಿಂಬಾಲಿಸಿ ಟ್ರಾಕ್ಟರ್ನಿಂದ ಆತನ ಬೈಕ್ಗೆ ಗುದ್ದಿ ನೆಲಕ್ಕೆ ಕೆಡವಿದ್ದಾರೆ. ಆಗ ಹೊಲದಲ್ಲಿ ಬೀಳುತ್ತಿದ್ದಂತೆ ಕೊಡಲಿ, ಮಚ್ಚು ಹಾಗೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
9 ಜನ ಆರೋಪಿಗಳ ಪೈಕಿ ಎ-1 ಆರೋಪಿ ಹುಚ್ಚಪ್ಪ ಎನ್ನುವವನೇ ಇದಕ್ಕೆ ಸೂತ್ರಧಾರಿ ಎಂದು ತಿಳಿದು ಬಂದಿದೆ. ಈ ಕುರಿತು ಮೃತನ ಕುಟುಂಬಸ್ಥರು ದೂರು ನೀಡಿದ್ದಾರೆ. ಮೃತ ಮಾರ್ಕಂಡಯ್ಯನ ಕುಟುಂಬಕ್ಕೂ ಹಾಗೂ ಆರೋಪಿ ಹುಚ್ಚಪ್ಪನ ಕುಟುಂಬಸ್ಥರ ನಡುವೆ ಹೊಲದ ವಿಷಯವಾಗಿ ಮನಸ್ತಾಪ ಇತ್ತು. ಅಲ್ಲದೇ, ಗ್ರಾಪಂ ಚುನಾವಣೆ ಸಂದರ್ಭದಲ್ಲಿ ಮಾರ್ಕಂಡಯ್ಯನ ಸಹೋದರ ಗೆದ್ದಿದ್ದ, ಆರೋಪಿ ಹುಚ್ಚಪ್ಪನ ಅಳಿಯ ಸೋಲು ಕಂಡಿದ್ದ. ಇದು ಕೂಡ ದ್ವೇಷಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.