ರಾಜ್ಯದ ರಾಜಕೀಯ ಪರಿಸ್ಥಿತಿ ಗಬ್ಬೆದ್ದು ಹೋಗಿದೆ ಎಂಬ ಅಸಮಾಧಾನವನ್ನು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷಗಳು ಒಂದು ರೀತಿಯ ಅಜಾಗರೂಕತೆಯ ಮತ್ತು ಗೊಂದಲದ ಮಾರ್ಗದಲ್ಲಿ ಸಾಗುತ್ತಿವೆ ಎಂದು ಖಂಡಿಸಿದ್ದಾರೆ.
ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ:
ಈ ಪಾರ್ಟಿ, ಆ ಪಾರ್ಟಿ ಅಂತ ವ್ಯತ್ಯಾಸವೇ ಇಲ್ಲ. ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಗುಂಪುಗಾರಿಕೆ ಜಾಸ್ತಿಯಾಗಿದೆ. ಪಕ್ಷಗಳ ಹೈಕಮಾಂಡ್ ಏನು ಮಾಡುತ್ತಿದೆ ಎನ್ನುವುದೇ ಸ್ಪಷ್ಟವಾಗುತ್ತಿಲ್ಲ, ಎಂದು ಈಶ್ವರಪ್ಪ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಿಜೆಪಿಯ ಹಿನ್ನಡೆಯ ಬಗ್ಗೆ ಟೀಕೆ:
ಒಂದು ಕಾಲದಲ್ಲಿ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಸುಧೃಢವಾಗಿ ನಡೆಯುತ್ತಿತ್ತು. ಆದರೆ ಇಂದು ಅದು ಜಾತಿ ರಾಜಕೀಯದ ಮಾರ್ಗದಲ್ಲಿ ಸಾಗುತ್ತಿದೆ. ಇದರಿಂದ ಪಕ್ಷದ ಹಿರಿಮೆಗೆ ಹಾನಿಯಾಗಿದೆ, ಎಂದು ಅವರು ದೂರಿದ್ದಾರೆ.
ಬಿಜೆಪಿ ಕಟ್ಟಿದ್ದ ಹಿರಿಯ ನಾಯಕರು ಈಗ ಪಕ್ಕಕ್ಕೆ ಸರಿದಿದ್ದಾರೆ. ಅವರ ಅನುಭವ ಮತ್ತು ಮಾರ್ಗದರ್ಶನವನ್ನು ಪಕ್ಷ ಬಳಸಿಕೊಳ್ಳುತ್ತಿಲ್ಲ. ಇದರಿಂದ ಬಿಜೆಪಿ ತನ್ನ ನೈತಿಕ ಪ್ರಾಮಾಣಿಕತೆಯನ್ನು ಕಳೆದುಕೊಳ್ಳುತ್ತಿದೆ, ಎಂದು ಈಶ್ವರಪ್ಪ ಹೇಳಿದ್ದಾರೆ.