ಯುಜಿಸಿ ನೆಟ್ 2020 ಪರೀಕ್ಷೆ ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ
ಹೊಸದಿಲ್ಲಿ, ಸೆಪ್ಟೆಂಬರ್15: ಯುಜಿಸಿ ನೆಟ್ 2020 ಪರೀಕ್ಷೆಯನ್ನು ಮುಂದೂಡಲಾಗಿದ್ದು, ಸೆಪ್ಟೆಂಬರ್ 24 ರಿಂದ ಪರೀಕ್ಷೆ ನಡೆಯಲಿದೆ.
ಯುಜಿಸಿ-ನೆಟ್ 2020 ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸೋಮವಾರ ಮುಂದೂಡಿದೆ. ಯುಜಿಸಿ-ನೆಟ್ ಜೂನ್ / ಸೆಪ್ಟೆಂಬರ್ ಪರೀಕ್ಷೆಯನ್ನು ಸೆಪ್ಟೆಂಬರ್ 16 ಮತ್ತು 25 ರ ನಡುವೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಈಗ ಸೆಪ್ಟೆಂಬರ್ 24 ರಿಂದ ಪ್ರಾರಂಭವಾಗಲಿದೆ. ಪರೀಕ್ಷೆಯ ಪೂರ್ಣ ವೇಳಾಪಟ್ಟಿಯನ್ನು ತರುವಾಯ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 16, 17, 22 ಮತ್ತು 23 ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಐಸಿಎಆರ್ ಪರೀಕ್ಷೆಗಳನ್ನು ನಡೆಸಲಿದೆ. ಇದರ ದೃಷ್ಟಿಯಿಂದ ಯುಜಿಸಿ-ನೆಟ್ 2020 ಪರೀಕ್ಷೆ ಈಗ ಸೆಪ್ಟೆಂಬರ್ 24 ರಿಂದ ನಡೆಯಲಿದ ಎಂದು ಎನ್ಟಿಎ ಹಿರಿಯ ನಿರ್ದೇಶಕ ಸಾಧನಾ ಪರಾಶರ್ ತಿಳಿಸಿದ್ದಾರೆ.
ಎರಡೂ ಪರೀಕ್ಷೆಗಳನ್ನು ಕೆಲವರು ಹಾಜರಾಗುವ ಹಿನ್ನೆಲೆಯಲ್ಲಿ ಅವರ ವಿನಂತಿ ಮೇರೆಗೆ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಕೊರೋನವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಜೂನ್ 2020 ರಂದು ಪ್ರಾರಂಭವಾಗಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ವಿವಿಧ ಪರೀಕ್ಷೆಗಳ ಹೊಸ ವೇಳಾಪಟ್ಟಿಯನ್ನು ಎನ್ಟಿಎ ಆಗಸ್ಟ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡಿತ್ತು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯುಜಿಸಿ-ನೆಟ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಸಹಾಯಕ ಪ್ರಾಧ್ಯಾಪಕ ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ನಡೆಸುತ್ತದೆ. ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದೆ. ಎರಡೂ ಪತ್ರಿಕೆಗಳನ್ನು ಮೂರು ಗಂಟೆಗಳ ಅವಧಿಯಲ್ಲಿ ನಡೆಸಲಾಗುವುದು. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಕ್ರಮದಲ್ಲಿ ಪರೀಕ್ಷೆ ನಡೆಯಲಿದೆ.