ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ, ಮೇ 31 ರಂದು ರಾಜ್ಯಕ್ಕೆ ಮರಳುತ್ತೇನೆಂದು ಹೇಳಿದ್ದು, ಅವರು ಬರುತ್ತಿದ್ದಂತೆ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲೇ ಎಸ್ ಐಟಿ ವಿಚಾರಣೆ ಎದುರಿಸುತ್ತೇನೆ ಎಂದು ಹೇಳಿರುವುದನ್ನು ಸ್ವಾಗತ ಮಾಡುತ್ತೇನೆ. ಕರ್ನಾಟಕ ಇತಿಹಾಸದಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂದು ಜನರು ಹೇಳುತ್ತಿರುವ ಸಮಯದಲ್ಲಿ ಪ್ರಜ್ವಲ್ ರನ್ನು ವಿದೇಶದಿಂದ ಕರೆ ತರಲು ಪ್ರಯತ್ನಗಳು ನಡೆಯುತ್ತಿವೆ. ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ ಎರಡು ಪತ್ರ ಬರೆದಿದ್ದಾರೆ. ಬ್ಲೂ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಮೂಲಕ ಇಂಟರ್ ಪೋಲ್ ಗೆ ಮನವಿ ಮಾಡಿದ್ದೇವು ಎಂದು ಹೇಳಿದ್ದಾರೆ.
ಪಾಸ್ ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಇತ್ತೀಚಿಗೆ ಹೇಳಿತ್ತು. ಎಸ್‌ಐಟಿ ತನ್ನಲ್ಲಿರುವ ಮಾಹಿತಿ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧನ ವಾರಂಟ್ ಹೊರಡಿಸಿರುವುದರಿಂದ ಪ್ರಜ್ವಲ್ ರನ್ನು ಬಂಧಿಸಬೇಕಾಗಬಹುದು. ಆದರೆ, ಪ್ರಜ್ವಲ್ ನುಡಿದಂತೆ ನಡೆಯುತ್ತಾರಾ ನೋಡಬೇಕಿದೆ ಎಂದು ಹೇಳಿದ್ದಾರೆ.
ಪ್ರಜ್ವಲ್ ವಿಡಿಯೋ ನಾನು ನೋಡಿಲ್ಲ. ಹೊರರಾಜ್ಯದಿಂದ ಯಾರನ್ನಾದರೂ ಕರೆತರುವುದು ಸುಲಭವಲ್ಲ, ಕೆಲವು ವಿಧಿವಿಧಾನಗಳನ್ನು ಅನುಸರಿಸಬೇಕು. ಪ್ರಜ್ವಲ್ ಪಾಸ್ ಪೋರ್ಟ್ ರದ್ದುಗೊಳಿಸುವುದಾಗಿ ಕೇಂದ್ರ ವಿದೇಶಾಂಗ ಸಚಿವರು ಹೇಳಿದ್ದರು. ಆದರೆ, ಅದು ಆಗಲಿಲ್ಲ. ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.