ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಬರೋಬ್ಬರಿ 35 ದಿನಗಳ ಬಳಿಕ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾರೆ.
ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಏಪ್ರಿಲ್ 27ರಂದು ಜರ್ಮನಿಗೆ ಹಾರಿದ್ದ ಪ್ರಜ್ವಲ್, ಜರ್ಮನಿಯ ಮ್ಯೂನಿಕ್‌ನಿಂದ ಮಧ್ಯರಾತ್ರಿ ಆಗಮಿಸಿದ್ದಾರೆ. ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನ ಸುತ್ತುವರಿದ ಸಿಐಎಸ್‌ಎಫ್ ಸಿಬ್ಬಂದಿ, ಪ್ರಜ್ವಲ್ ರನ್ನು ಬಂಧಿಸಿದೆ. ಆನಂತರ ನಿಲ್ದಾಣದಲ್ಲಿ ಇಮಿಗ್ರೇಷನ್ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಅವರನ್ನ ಎಸ್‌ಐಟಿಗೆ ಹಸ್ತಾಂತರಿಸಲಾಯಿತು.
ಪ್ರಜ್ವಲ್ ಬಂಧನದಿಂದಾಗಿ ಎಲ್ಲೆಡೆ ಹೈ ಅಲರ್ಟ್ ಕೈಗೊಳ್ಳಲಾಗಿತ್ತು. ಮ್ಯೂನಿಕ್ ವಿಮಾನ ನಿಲ್ದಾಣದ ವಲಸೆ ವಿಭಾಗ ಬೆಂಗಳೂರು ವಿಮಾನ ನಿಲ್ದಾಣದ ವಲಸೆ ವಿಭಾಗಕ್ಕೆ ಮೊದಲೇ ಪ್ರಯಾಣಿಕರ ಪಟ್ಟಿ ಹಸ್ತಾಂತರಿಸಿತ್ತು. ಪಟ್ಟಿಯಲ್ಲಿ ಜ್ವಲ್ ರೇವಣ್ಣ ಹೆಸರಿತ್ತು. 3 ಲಕ್ಷ ರೂ. ಖರ್ಚು ಮಾಡಿ ಬಿಸಿನೆಸ್ ದರ್ಜೆಯ ಟಿಕೆಟ್ ಖರೀದಿಸಿ ಪ್ರಜ್ವಲ್ ಮ್ಯೂನಿಕ್‌ನಿಂದ ಹೊರಟಿದ್ದರು. ಪ್ರಜ್ವಲ್ ರೇವಣ್ಣ ಒಬ್ಬಂಟಿಯಾಗಿ ವಿಂಡೋ ಸೀಟ್‌ನಲ್ಲಿ ಕುಳಿತಿದ್ದರು.
ಅಶ್ಲೀಲ ವೀಡಿಯೋಗಳನ್ನೊಳಗೊಂಡ ಪೆನ್ ಡ್ರೈವ್ ಪ್ರಕರಣ ಏಪ್ರಿಲ್ 23ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಂತೆ ಎಸ್‌ಐಟಿ ರಚನೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಅಶ್ಲೀಲ ವೀಡಿಯೋ ಪ್ರಕರಣ ಹೊರಬರುತ್ತಿದ್ದಂತೆ ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ವಿಡಿಯೋ ಮಾಡಿ ಮರಳಿ ರಾಜ್ಯಕ್ಕೆ ಬರುವುದಾಗಿ ಹೇಳಿದ್ದರು. ಸದ್ಯ ಆಗಮಿಸಿದ್ದು ಎಸ್ ಐಟಿ ವಶಕ್ಕೆ ಪಡೆದಿದೆ.