ರಾಜ್ಯದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಖಾಸಗಿ ಶಾಲೆಗಳ ರಜಾ ಅವಧಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕ್ರೈಸ್ತ ಮಿಷನರಿ ಶಾಲೆಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ನೀಡಲಾಗುವ ದೀರ್ಘಾವಧಿಯ ರಜೆಯನ್ನು ರದ್ದುಗೊಳಿಸಬೇಕು ಮತ್ತು ರಜೆಯನ್ನು ಕೇವಲ ಡಿಸೆಂಬರ್ 25ಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಅವರು ಶಿಕ್ಷಣ ಇಲಾಖೆಯನ್ನು ಮತ್ತು ಖಾಸಗಿ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.
ಹಿಂದೂ ಹಬ್ಬಗಳಿಗೆ ಅನ್ಯಾಯವೇಕೆ?
ಕ್ರಿಶ್ಚಿಯನ್ ಕಾನ್ವೆಂಟ್ ಹಾಗೂ ಶಾಲಾ-ಕಾಲೇಜುಗಳಲ್ಲಿ ಶೇಕಡಾ 90ರಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಿಂದೂಗಳೇ ಆಗಿದ್ದಾರೆ. ಆದರೆ ಅಲ್ಲಿ ಹಿಂದೂ ಹಬ್ಬಗಳಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ. ನಾಡಹಬ್ಬ ದಸರಾ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ರಜೆ ನೀಡದೆ ಉಲ್ಲಂಘನೆ ಮಾಡಲಾಗುತ್ತದೆ. ಆದರೆ, ಶಾಲೆಯಲ್ಲಿ ಕೇವಲ ಶೇಕಡಾ 10ರಷ್ಟು ಮಾತ್ರ ಇರುವ ಕ್ರಿಶ್ಚಿಯನ್ ಸಮುದಾಯದ ಹಬ್ಬಕ್ಕೆ ಬರೋಬ್ಬರಿ 10 ದಿನಗಳ ಕಾಲ ರಜೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಬಹುಸಂಖ್ಯಾತ ಹಿಂದೂಗಳ ಹಬ್ಬದ ರಜೆಗಳನ್ನು ಕಡಿತಗೊಳಿಸಿ, ಅಲ್ಪಸಂಖ್ಯಾತರ ಹಬ್ಬಕ್ಕೆ ಹೆಚ್ಚು ದಿನ ರಜೆ ನೀಡುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೆಡೆ ಶಿಕ್ಷಣ ಸಂಸ್ಥೆಗಳು ಕ್ರಿಶ್ಚಿಯನ್ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಲವಂತವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹೇರುತ್ತಿವೆ. ವಿದೇಶಿ ಸಂಸ್ಕೃತಿಯ ಭಾಗವಾದ ಸಾಂತಾಕ್ಲಾಸ್ ವೇಷಭೂಷಣ ಧರಿಸುವ ಮೂಲಕ ಮತ್ತು ಪಾಶ್ಚಿಮಾತ್ಯ ಆಚರಣೆಗಳ ಮೂಲಕ ಹಿಂದೂಗಳಿಗೆ ವಂಚನೆ ಮಾಡಲಾಗುತ್ತಿದೆ. ಇಲ್ಲಿ ನೇರವಾಗಿ ಮತಾಂತರ ನಡೆಯದಿದ್ದರೂ, ಇಂತಹ ಆಚರಣೆಗಳ ಮೂಲಕ ಮಕ್ಕಳನ್ನು ಸಾಂಸ್ಕೃತಿಕವಾಗಿ ಮತ್ತು ಮಾನಸಿಕವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಬ್ರಿಟಿಷರು ಭಾರತ ಬಿಟ್ಟು ಹೋಗಿಯಾಗಿದೆ, ಆದರೂ ಅವರ ಪದ್ಧತಿಗಳನ್ನು ಇನ್ನೂ ಅನುಸರಿಸುವ ಅವಶ್ಯಕತೆ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಶಾಲೆಗಳಿಗೆ ಬೀಗ ಹಾಕುವ ಎಚ್ಚರಿಕೆ
ಪಾಶ್ಚಿಮಾತ್ಯ ಹಬ್ಬವಾದ ಕ್ರಿಸ್ಮಸ್‌ಗೆ ಶಾಲಾ-ಕಾಲೇಜುಗಳಲ್ಲಿ ದೀರ್ಘ ರಜೆ ನೀಡಬಾರದು. ಒಂದು ವೇಳೆ ನಿಯಮ ಮೀರಿ ರಜೆ ನೀಡಿದ್ದೇ ಆದಲ್ಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಂತಹ ಶಿಕ್ಷಣ ಸಂಸ್ಥೆಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಹಿಂದೂ ಧಾರ್ಮಿಕ ಹಬ್ಬಗಳ ಮೇಲೆ ದಬ್ಬಾಳಿಕೆ ನಡೆಸಿ, ಕ್ರಿಸ್ಮಸ್ ರಜೆ ನೀಡುವ ಇಂತಹ ನಡೆಯನ್ನು ಶ್ರೀರಾಮಸೇನೆ ಸಹಿಸುವುದಿಲ್ಲ. ಈ ಧೋರಣೆ ಬದಲಾಗದಿದ್ದರೆ ಅಂತಹ ಕ್ರಿಶ್ಚಿಯನ್ ಶಾಲೆಗಳ ಗೇಟ್‍ಗಳಿಗೆ ನಾವೇ ಬೀಗ ಹಾಕುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.






