ಹಿಮಾಚಲ ಪ್ರದೇಶದಲ್ಲಿ ಮೋದಿ ಪ್ರವಾಸ – ಹೂಡಿಕೆದಾರರ ಸಮಾವೇಶದಲ್ಲಿ ಭಾಗಿ
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹಿಮಾಚಲ ಪ್ರದೇಶದ ಸಾಂಸ್ಕೃತಿಕ ರಾಜಧಾನಿ ಮಂಡಿಗೆ ಆಗಮಿಸಿದರು. ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಸೋಮವಾರ 11:30 ಕ್ಕೆ ಕಂಗಣಿಧಾರ್ ಹೆಲಿಪ್ಯಾಡ್‌ಗೆ ಬಂದಿಳಿಯಿತು. ಅವರು ಬಂದ ತಕ್ಷಣ, ಸಾಂಪ್ರದಾಯಿಕ ಸಂಗೀತ ವಾದ್ಯಗಳೊಂದಿಗೆ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು.
ಜಾಗತಿಕ ಹೂಡಿಕೆದಾರರ ಮೊದಲ ಎಕ್ಸ್‌ಪೋ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದರು.
ತಮ್ಮ ಭೇಟಿಯ ವೇಳೆ ಪ್ರಧಾನಿಯವರು 11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿಯವರ ಭೇಟಿಯ ನಂತರ ಪ್ರಾರಂಭವಾಗಲಿರುವ ಸುಮಾರು 28,000 ಕೋಟಿ ರೂಪಾಯಿಗಳ ಯೋಜನೆಗಳೊಂದಿಗೆ ಈ ವಲಯದಲ್ಲಿನ ಹೂಡಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಅವರು ಆರು ರಾಜ್ಯಗಳು ಸೇರಿ ನಿರ್ಮಿಸಿರುವ ರೇಣುಕಾಜಿ ಅಣೆಕಟ್ಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯಿಂದ ದೆಹಲಿಯ ನೀರಿನ ಕೊರತೆಯನ್ನು ನೀಗಿಸಬಹುದು. ಪ್ರಧಾನಮಂತ್ರಿಯವರು ಲುಹ್ರಿ ಚರಣ್ ಒನ್ ಜಲವಿದ್ಯುತ್ ಯೋಜನೆ ಮತ್ತು ಧೌಲಸಿದ್ಧ ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದಲ್ಲದೇ ಸವಾರ-ಕುದ್ದು ಜಲವಿದ್ಯುತ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಹಿಮಾಚಲ ಪ್ರದೇಶದ ಬಿಜೆಪಿ ಸರ್ಕಾರ ಇಂದಿಗೆ ನಾಲ್ಕು ವರ್ಷಗಳನ್ನು ಪೂರೈಸುತ್ತಿರುವುದು ಗಮನಾರ್ಹ. ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಭರ್ಜರಿ ಉಡುಗೊರೆ ನೀಡಲು ಪ್ರಧಾನಿ ನರೇಂದ್ರ ಮೋದಿ ದೇವಭೂಮಿಗೆ ತೆರಳಿದ್ದಾರೆ.








