ಟೆಲ್ ಅವಿವ್: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ (Palestine) ನಡುವೆ ನಡೆಯುತ್ತಿರುವ ಯುದ್ಧ 9ನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.
ಗಾಜಾ ಪಟ್ಟಿಯಲ್ಲಿ (Gaza Stripe) ಇಸ್ರೇಲ್ ರಕ್ಷಣಾ ಪಡೆಗಳನ್ನು ಖುದ್ದು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯ ಹೆಚ್ಚಾಗುವಂತೆ ಮಾಡಿದ್ದಾರೆ. ಐಡಿಎಫ್ (IDF) ಸಿಬ್ಬಂದಿಯೊಂದಿಗಿನ ಸಂವಾದದ ದೃಶ್ಯಗಳನ್ನು ಇಸ್ರೇಲ್ ಪ್ರಧಾನಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.
ಆಟ ಇನ್ನು ಮುಗಿದಿಲ್ಲ, ಅಸಲಿ ಆಟ ಇನ್ನು ಮುಂದೆ ಶುರುವಾಗಲಿದೆ ಎಂದು ಸೈನಿಕರ ಜೊತೆಗಿನ ಸಂವಾದದಲ್ಲಿ ಹೇಳುವ ಮೂಲಕ ಹಮಾಸ್ ಬಂಡುಕೋರರಿಗೆ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಗಾಜಾಪಟ್ಟಿಯಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ (Air Strike) ಮುಂದುವರೆದಿದ್ದು, ಬಾಂಬ್ ದಾಳಿಗೆ ಹಲವು ಸ್ಥಳಗಳು ಧ್ವಂಸವಾಗಿವೆ. ಜಬಾಲಿಯಾ, ಬೀಚ್ ಕ್ಯಾಂಪ್‌ನಲ್ಲಿ ಶನಿವಾರ ಇಸ್ರೇಲ್ ದಾಳಿ ನಡೆಸಿದ್ದು, ಹತ್ತಾರು ಜನ ಸಾವನ್ನಪ್ಪಿದ್ದಾರೆ.
ಭೂ, ವಾಯು ಆಯಿತು, ಸದ್ಯ ಸಮುದ್ರ ಮಾರ್ಗದಲ್ಲಿಯೂ ಹಮಾಸ್ ಮತ್ತು ಇಸ್ರೇಲ್ ಮುಖಾಮುಖಿಯಾಗಿದ್ದು, ಇಸ್ರೇಲ್ ಗಡಿ ಪ್ರವೇಶಕ್ಕೆ ಪ್ರಯತ್ನಿಸಿದ ಹಮಾಸ್ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ.