ಸಚಿನ್, ಸೆಹ್ವಾಗ್, ಬ್ರಿಯಾನ್ ಲಾರಾನ ಆಟವನ್ನು ನೆನಪು ಮಾಡುತ್ತಿರುವ ಪೃಥ್ವಿ ಶಾ…!
ನೋಡೋಕೆ ವಾಮನ ಮೂರ್ತಿ.. ವಯಸ್ಸು ಇನ್ನೂ 21.. ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ಕ್ರೀಸ್‍ಗೆ ಆಗಮಿಸುವಾಗ ಬ್ರಿಯಾನ್ ಲಾರಾನನ್ನು ನೆನಪಿಸುತ್ತಾರೆ.. ಬ್ಯಾಟಿಂಗ್ ಶೈಲಿಯ ಹಾವಭಾವವನ್ನು ನೋಡಿದಾಗ ಸಚಿನ್ ತೆಂಡುಲ್ಕರ್ ನೆನಪಾಗುತ್ತಾರೆ.. ಆಕ್ರಮಣಕಾರಿ ಪ್ರವೃತ್ತಿಯ ಆಟವನ್ನು ಗಮನಿಸಿದಾಗ ವೀರೇಂದ್ರ ಸೆಹ್ವಾಗ್ ಆಟದ ವೈಖರಿ ಕಣ್ಣ ಮುಂದೆ ಹಾದು ಹೋಗುತ್ತದೆ.
ಇದು ಪೃಥ್ವಿ ಶಾ ಆಟದ ಖದರ್.. ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ, ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ಈ ಜನರೇಷನ್ ನಲ್ಲಿ ನೆನಪಿಸಿಕೊಳ್ಳುವಂತೆ ಆಡುತ್ತಿದ್ದಾರೆ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ ಮೆನ್ ಪೃಥ್ವಿ ಶಾ.
ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿ ಗಮನ ಸೆಳೆದಿದ್ದ ಪೃಥ್ವಿ ಶಾ, ಗಾಯ, ಡೋಪಿಂಗ್, ಕಳಪೆ ಫಾರ್ಮ್ ನಿಂದಾಗಿ ಅಷ್ಟೇ ವೇಗವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗಿದ್ದರು. ಮೂರು ವರ್ಷಗಳ ಹಿಂದೆಯೇ ಟೀಮ್ ಇಂಡಿಯಾಗೆ ಎಂಟ್ರಿಯಾಗಿದ್ರೂ ಕೂಡ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿರಲಿಲ್ಲ.
ಅದ್ಭುತ ಪ್ರತಿಭೆ, ಚೆಂಡಿನ ಗತಿಯನ್ನು ಅರಿತುಕೊಂಡು ಆಡುವ ಕಲೆ, ಟೈಮಿಂಗ್, ಬ್ಯಾಟಿಂಗ್ ಕೌಶಲ್ಯತೆ ಎಲ್ಲವೂ ಅದ್ಭುತವಾಗಿದೆ. ಆದ್ರೆ ಪೃಥ್ವಿ ಶಾ ಕೆಲವೊಂದು ತಾನಾಗೇ ಮಾಡಿಕೊಂಡಿರುವ ಪ್ರಮಾದದಿಂದಾಗಿ ಕಳೆದ ಮೂರು ವರ್ಷಗಳ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡಿದ್ದರು.
ಆದ್ರೆ ಕಳೆದ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದ ನಂತರ ಪೃಥ್ವಿ ಶಾ ಬುದ್ದಿ ಕಲಿತುಕೊಂಡ್ರು. ದೇಸಿ ಪಂದ್ಯಗಳಲ್ಲಿ ರನ್ ಮಳೆಯನ್ನು ಸುರಿಸಿದ್ರು. ಜೊತೆ ಐಪಿಎಲ್ ನಲ್ಲೂ ಲಯವನ್ನು ಕಳೆದುಕೊಂಡು ಮತ್ತೆ ಟೀಮ್ ಇಂಡಿಯಾದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಟೆಸ್ಟ್ ಸರಣಿಗೆ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಬಹುಶಃ ಶ್ರೀಲಂಕಾ ಸರಣಿ ಮುಗಿದ ನಂತರ ಪೃಥ್ವಿ ಶಾ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಬಹುದು.
ಇನ್ನೊಂದೆಡೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ ರೀತಿಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಎಲ್ಲರೂ ಭೇಷ್ ಅನ್ನುತ್ತಿದ್ದಾರೆ. ಪೃಥ್ವಿ ಶಾ ಕೇವಲ 24 ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸಿದ್ರು. 9 ಬೌಂಡರಿಗಳ ಸಹಾಯದಿಂದ 43 ರನ್ ಗಳಿಸಿದ್ದ ಪೃಥ್ವಿ ಶಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು. ಅಂದ ಮೇಲೆ ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿ ಯಾವ ಮಟ್ಟದಲ್ಲಿತ್ತು ಎಂಬುದುನ್ನು ಊಹೆ ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ.
ಪೃಥ್ವಿ ಶಾ ಅವರ ಬ್ಯಾಟಿಂಗ್ ವೈಖರಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಂತೂ ಫುಲ್ ಫಿದಾ ಆಗಿದ್ದಾರೆ. ಸಚಿನ್, ಬ್ರಿಯಾನ್ ಲಾರಾ ಮತ್ತು ತನ್ನ (ಸೆಹ್ವಾಗ್) ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪೆಹ್ಲೆ 5.3 ಓವರ್ ಹಮಾರ ಜಲ್ವಾ ರಹಾ ಅಂತ ಬರೆದುಕೊಂಡಿದ್ದಾರೆ.
ಒಂದಂತೂ ನಿಜ, ಪೃಥ್ವಿ ಶಾ ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಚೆಂದ.. ಶಾ ಬ್ಯಾಟ್ ನಿಂದ ರನ್‍ಗಳು ಮೆಷಿನ್ ನಂತೆ ಹರಿದು ಬರುತ್ತವೆ. ಪೃಥ್ವಿ ಶಾ ಬ್ಯಾಟಿಂಗ್ ಸ್ಟೈಲ್, ನಡೆಯುವ ಶೈಲಿ, ಕೌಶಲ್ಯಗಳು ಎಲ್ಲವೂ ಕಣ್ಣಿಗೆ ಆನಂದವನ್ನುಂಟು ಮಾಡುತ್ತಿವೆ.
ಒಟ್ಟಿನಲ್ಲಿ ಪೃಥ್ವಿ ಶಾ ಹಳೆಯ ತಪ್ಪುಗಳನ್ನು ಮಾಡದೇ ಇದೇ ರೀತಿ ಮುಂದುವರಿದ್ರೆ ಭವಿಷ್ಯದ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರನಾಗಬಹುದು. ಸಚಿನ್ ನಂತರ ಕೊಹ್ಲಿ ಹೇಗೆ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿದ್ದಾರೋ ಅದೇ ರೀತಿ ಕೊಹ್ಲಿ ನಂತರ ಪೃಥ್ವಿ ಶಾ ಕ್ರಿಕೆಟ್ ಜಗತ್ತನ್ನು ಆಳಬಹುದು.. ಆದ್ರೆ ಬದ್ಧತೆ, ಏಕಾಗ್ರತೆ, ಕ್ರಿಕೆಟ್ ಮೇಲಿನ ಪ್ರೀತಿ ಇರಬೇಕು. ಅಹಂಕಾರ ಇರಬಾರದು ಅಷ್ಟೇ…!