ಬೆಂಗಳೂರಿನ ಸಂಚಾರ ದಟ್ಟಣೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿ ಲೇವಡಿ ಮಾಡಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜ್ಯದ ಭವಿಷ್ಯದ ನಾಯಕ ಎಂದು ಬಣ್ಣಿಸಿದ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ‘ಅವಿವೇಕಿ ಮುಟ್ಟಾಳ’ ಎಂದು ಜರಿದಿದ್ದಾರೆ.
ಪ್ರಿಯಾಂಕ್ ಖರ್ಗೆ ರಾಜ್ಯದ ಭವಿಷ್ಯ
ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಪ್ರದೀಪ್ ಈಶ್ವರ್, “ವಾಹನಗಳು ಹೆಚ್ಚಾದಾಗ ಸಂಚಾರ ದಟ್ಟಣೆ ಆಗುವುದು ಸಹಜ. ಇದರಲ್ಲಿ ವಿಚಿತ್ರವೇನಿದೆ? ಆದರೆ ಪ್ರಿಯಾಂಕ್ ಖರ್ಗೆ ಎಂದರೆ ಆರ್. ಅಶೋಕ್ ಅವರಿಗೆ ಯಾಕಿಷ್ಟು ಭಯವೋ ಅರ್ಥವಾಗುತ್ತಿಲ್ಲ. ಪ್ರಿಯಾಂಕ್ ಸಾಹೇಬರು ಈ ರಾಜ್ಯದ ಫ್ಯೂಚರ್. ಈ ಸತ್ಯವನ್ನು ಅಶೋಕ್ ಅವರು ಯಾವುದೇ ಕಾರಣಕ್ಕೂ ಮರೆಯಬಾರದು,” ಎಂದು ತಿರುಗೇಟು ನೀಡಿದರು.
ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರದೀಪ್ ಈಶ್ವರ್, “ಮಾಜಿ ಸಂಸದ ಮಿಸ್ಟರ್ ಅವಿವೇಕಿ ಮುಟ್ಟಾಳ ಪ್ರತಾಪ್ ಸಿಂಹ, ನೀವು ಸಿದ್ದರಾಮಯ್ಯ ಅವರ ಕಾಲಿನ ದೂಳಿಗೂ ಸಮನಲ್ಲ. ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ಮೊದಲು ನಿಮ್ಮ ಪಕ್ಷದ ನಾಯಕರಾದ ವಿಜಯೇಂದ್ರ, ಆರ್. ಅಶೋಕ್, ಯತ್ನಾಳ್, ಮೋದಿ, ಅಮಿತ್ ಶಾ, ಬಿ.ಎಲ್. ಸಂತೋಷ್ ಅವರ ‘ಟ್ಯಾಕ್ಸ್ ಸ್ಲ್ಯಾಬ್’ ಬಗ್ಗೆ ಮಾತನಾಡಿ, ಆ ವಿಷಯವನ್ನು ಮರೆತಿದ್ದೀರಾ?” ಎಂದು ನೇರವಾಗಿ ಸವಾಲು ಹಾಕಿದರು.
ಯತೀಂದ್ರ ಸಿದ್ದರಾಮಯ್ಯ ಆಯ್ಕೆ ಸಮರ್ಥನೆ
ಯತೀಂದ್ರ ಸಿದ್ದರಾಮಯ್ಯ ಅವರನ್ನು ಎಂಎಲ್‌ಸಿ ಮಾಡಿರುವುದನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, “ಯತೀಂದ್ರ ಸಾಹೇಬರನ್ನು ಕೇವಲ ಸಿದ್ದರಾಮಯ್ಯನವರ ಮಗ ಎಂಬ ಕಾರಣಕ್ಕೆ ಎಂಎಲ್‌ಸಿ ಮಾಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ ಈ ಸ್ಥಾನ ನೀಡಲಾಗಿದೆ. ಅವರು ತಮ್ಮ ಪರಿಮಿತಿಯಲ್ಲಿ ಶಿಫಾರಸ್ಸು ಮಾಡುತ್ತಾರೆ. ಟ್ಯಾಕ್ಸ್ ಬಗ್ಗೆ ಮಾತನಾಡುವ ನೀವು, ಯತ್ನಾಳ್ ಅವರು ಬಿಜಾಪುರದಲ್ಲಿ ತೆಗೆದುಕೊಳ್ಳುವ ಟ್ಯಾಕ್ಸ್ ಬಗ್ಗೆ ಏಕೆ ಮಾತನಾಡುವುದಿಲ್ಲ? ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ,” ಎಂದು ಕುಟುಕಿದರು.
ಬಿಜೆಪಿಗೆ ಧಮ್ ಇದ್ರೆ ಚುನಾವಣೆ ಬಹಿಷ್ಕರಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜಿಸಿ ‘ಗ್ರೇಟರ್ ಬೆಂಗಳೂರು’ ರಚಿಸುವ ಸರ್ಕಾರದ ಪ್ರಸ್ತಾಪವನ್ನು ಬಿಜೆಪಿ ವಿರೋಧಿಸುತ್ತಿರುವುದಕ್ಕೆ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು. “ಬಿಜೆಪಿಯವರು ಗ್ರೇಟರ್ ಬೆಂಗಳೂರನ್ನು ಬಾಯ್ಕಾಟ್ ಮಾಡಿದ್ದಾರೆ. ಅಶೋಕಣ್ಣ, ನಿಮಗೆ ಧಮ್ ಇದ್ದರೆ ಮುಂಬರುವ ಬಿಬಿಎಂಪಿ ಚುನಾವಣೆಯನ್ನೇ ಬಹಿಷ್ಕರಿಸಿ. ನಿಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ. ನೀವು ಇನ್ನೂ 15-20 ವರ್ಷಗಳ ನಂತರ ಅಧಿಕಾರಕ್ಕೆ ಬರುತ್ತೀರಿ, ಆಗ ನಿಮಗೆ ಬೇಕಾದಂತೆ ಮಾಡಿಕೊಳ್ಳಿ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ, ಅಭಿವೃದ್ಧಿಯ ಬಗ್ಗೆ ಕಾಳಜಿಯೂ ಇಲ್ಲ. ಕೇವಲ ಸಿದ್ದರಾಮಯ್ಯ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಪ್ರತಾಪ್ ಸಿಂಹ ಒಬ್ಬಂಟಿ
ಬಿಜೆಪಿಯ ಆಂತರಿಕ ಬೇಗುದಿಯ ಬಗ್ಗೆಯೂ ಮಾತನಾಡಿದ ಅವರು, “ಪ್ರತಾಪ್ ಸಿಂಹ ಅವರೇ, ನಿಮ್ಮನ್ನು ವಿಜಯೇಂದ್ರ ಅವರಿಗೆ ಕಂಡರೆ ಆಗುವುದಿಲ್ಲ, ಆರ್. ಅಶೋಕ್ ಹತ್ತಿರ ಸೇರಿಸುವುದಿಲ್ಲ, ಯತ್ನಾಳ್ ಕೂಡ ದೂರವಿಡುತ್ತಾರೆ. ಹೀಗಿರುವಾಗ ನೀವು ಯಾಕೆ ಸುಮ್ಮನೆ ಬೊಬ್ಬೆ ಹೊಡೆಯುತ್ತೀರಿ? ನೀವು ಎಷ್ಟೇ ಬಾಯಿ ಬಡಿದುಕೊಂಡರೂ ನಿಮ್ಮನ್ನು ಬಿಜೆಪಿಯವರು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ,” ಎಂದು ಲೇವಡಿ ಮಾಡಿದರು..








