ಕಲಬುರಗಿ: “ತಮ್ಮ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಬೇಕೆಂಬ ಒಂದೇ ಕಾರಣಕ್ಕಾಗಿ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಬೇಕಾಯಿತು. ಒಂದು ವೇಳೆ ಪ್ರಿಯಾಂಕ್ ಅವರು ಮಂತ್ರಿಯಾಗುವ ಆಸೆ ಬಿಟ್ಟಿದ್ದರೆ, ಇಂದು ಮಲ್ಲಿಕಾರ್ಜುನ ಖರ್ಗೆಯವರೇ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಿದ್ದರು,” ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯ
ಕಾಂಗ್ರೆಸ್ ಪಕ್ಷ ಎಂದಿಗೂ ದಲಿತ ಸಮುದಾಯಕ್ಕೆ ಉನ್ನತ ಸ್ಥಾನ ನೀಡುವುದಿಲ್ಲ ಎಂದು ಆರೋಪಿಸಿದ ನಾರಾಯಣಸ್ವಾಮಿ, “ಸಿದ್ದರಾಮಯ್ಯನವರು ಈಗಾಗಲೇ 7.5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಈಗಲೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸುಮಾರು 10 ಮಂದಿ ರೇಸ್‌ನಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬ ಗಟ್ಟಿ ನಾಯಕ, ಅವರು ಸಿಎಂ ಆದರೆ ಖುಷಿ. ಒಂದು ವೇಳೆ ಜಿ. ಪರಮೇಶ್ವರ್ ಅವರಿಗೇನಾದರೂ ಅವಕಾಶ ಸಿಕ್ಕರೆ, ಒಬ್ಬ ದಲಿತ ನಾಯಕ ಮುಖ್ಯಮಂತ್ರಿಯಾದರಲ್ಲ ಎಂಬ ಸಂತೋಷ ನನಗಿದೆ. ಆದರೆ, ಕಾಂಗ್ರೆಸ್ ದಲಿತರಿಗೆ ಉನ್ನತ ಹುದ್ದೆ ಕೊಡುವುದಿಲ್ಲ ಎನ್ನುವುದು ಐತಿಹಾಸಿಕ ಸತ್ಯ. ಹಿರಿಯ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಅವರನ್ನು ಕಾಂಗ್ರೆಸ್ ಯಾವ ಸ್ಥಿತಿಗೆ ತಂದು ನಿಲ್ಲಿಸಿತು ಎಂಬುದು ರಾಜ್ಯದ ಜನತೆಗೆ ತಿಳಿದಿದೆ,” ಎಂದು ಟೀಕಿಸಿದರು.
ಐ ಲವ್ ಆರ್‌ಎಸ್‌ಎಸ್, ಐ ಲವ್ ಡಿಎಸ್‌ಎಸ್
ಸಚಿವ ಪ್ರಿಯಾಂಕ್ ಖರ್ಗೆ ಕೇವಲ ಪ್ರಚಾರದ ಹುಚ್ಚಿಗಾಗಿ ಆರ್‌ಎಸ್‌ಎಸ್ ವಿಚಾರವನ್ನು ಪದೇಪದೇ ಕೆದಕುತ್ತಿದ್ದಾರೆ ಎಂದು ಕಿಡಿಕಾರಿದ ಅವರು, “ನಾನು ಆರ್‌ಎಸ್‌ಎಸ್‌ನವನಲ್ಲ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಆದರೆ, ನನಗೆ ಡಿಎಸ್‌ಎಸ್ (ದಲಿತ ಸಂಘರ್ಷ ಸಮಿತಿ) ಎಂದರೆ ಪ್ರೀತಿ, ಯಾಕೆಂದರೆ ಅದು ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡಿ ನ್ಯಾಯ ಕೊಡಿಸಿದೆ. ಹಾಗೆಯೇ, ನನಗೆ ಆರ್‌ಎಸ್‌ಎಸ್ ಎಂದರೂ ಪ್ರೀತಿ, ಏಕೆಂದರೆ ಅದು ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುವ ದೇಶಭಕ್ತ ಸಂಘಟನೆ,” ಎಂದರು.
“ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಎಂದಿಗೂ ಆರ್‌ಎಸ್‌ಎಸ್ ಅನ್ನು ವಿರೋಧಿಸಿರಲಿಲ್ಲ. ಆದರೆ, ಇದೇ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತು. ಇದೇ ಕಾರಣಕ್ಕೆ ಅಂಬೇಡ್ಕರ್ ಅವರು ‘ಕಾಂಗ್ರೆಸ್ ಒಂದು ಸುಡುವ ಮನೆ’ ಎಂದು ಕರೆದಿದ್ದರು. ದಲಿತರು ಕಾಂಗ್ರೆಸ್ ಪರ ನಿಲ್ಲುವುದು ಎಂದರೆ ಅಂಬೇಡ್ಕರ್ ಅವರಿಗೆ ವಿರೋಧ ವ್ಯಕ್ತಪಡಿಸಿದಂತೆ,” ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪುಂಡರು ಮನೆಗೆ ನುಗ್ಗಿ ಸಾಮೂಹಿಕ ಅತ್ಯಾಚಾರ ನಡೆಸುವಂತಹ ಘಟನೆಗಳು ನಡೆಯುತ್ತಿವೆ. ಆದರೆ ಸರ್ಕಾರ ಕಳ್ಳ ವೇಷ ಹಾಕಿ ನೋಡಿದರೂ ನೋಡದಂತೆ ನಟಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ, ಗ್ರಂಥಪಾಲಕರಿಗೆ ತಿಂಗಳುಗಟ್ಟಲೆ ಸಂಬಳ ನೀಡಿಲ್ಲ. ಚಾಮರಾಜನಗರದಲ್ಲಿ ನೀರುಗಂಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ದರಿದ್ರ ಆವರಿಸಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮುಖ್ಯಮಂತ್ರಿಗಳಿಗೆ ಅಮಾವಾಸ್ಯೆ ಮತ್ತು ಪೌರ್ಣಮಿಯ ವ್ಯತ್ಯಾಸವೇ ತಿಳಿದಿಲ್ಲ. ಸಚಿವರುಗಳು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುತ್ತಿಲ್ಲ, ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಒಟ್ಟಾರೆಯಾಗಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ,” ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.








