ನವದೆಹಲಿ: ವಾಲ್ಮೀಕಿ ನಿಗಮ, ಮುಡಾ ಹಗರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ನವದೆಹಲಿಯಲ್ಲಿ ಬಿಜೆಪಿ (BJP Protest) ಸಂಸದರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಬಿಜೆಪಿ ಸಂಸದರು ದೆಹಲಿಯ ಸಂಸತ್ ನ ಗಾಂಧಿ ಪ್ರತಿಮೆ ಎದುರು ಸರ್ಕಾರವು ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಇವುಗಳ ಬಗ್ಗೆ ತನಿಖೆ ನಡೆಯಬೇಕು. ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಕೂಡಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮುಡಾ ಆಸ್ತಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಕೋಟಿಗಟ್ಟಲೆ ಲಾಭ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಡೆದಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರತಿಭಟಿಸಿ ಸತ್ಯವನ್ನು ಜನರ ಮುಂದೆ ತರುವುದು ನಮ್ಮ ಕರ್ತವ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಜಗದೀಶ್ ಶೆಟ್ಟರ್, ಗೋವಿಂದ್ ಕಾರಜೋಳ, ಪಿಸಿ ಮೋಹನ್, ಬಿ.ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಯದುವೀರ್ ಒಡೆಯರ್, ಜಗ್ಗೇಶ್, ಈರಣ್ಣ ಕಡಾಡಿ, ನಾರಾಯಣ ಸಾ ಬಾಂಡಗೆ, ಲೇಹರ್ ಸಿಂಗ್, ಪಿಸಿ ಗದ್ದಿಗೌಡರ್, ಡಾ. ಮಂಜುನಾಥ್, ಮಲ್ಲೇಶ್ ಬಾಬು, ಕ್ಯಾ. ಬ್ರಿಜೇಶ್ ಚೌಟಾ, ರಮೇಶ್ ಜಿಗಜಿಣಗಿ ಇದ್ದರು.








